ಜಿಲ್ಲೆ

ಸರ್ಕಾರಿ ಶಾಲೆ ದತ್ತು ಪಡೆಯಲು ಮುಂದಾದ ಚಿತ್ರನಟ

ಚಾಮರಾಜನಗರ: ಕನ್ನಡ ಚಲನಚಿತ್ರಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹಿರಿಯ ನಟರಾದ ಗಣೇಶ್‌ರಾವ್ ಕೇಸರ್ಕರ್ ಅವರು ಹುಟ್ಟೂರಿನಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಹಿರಿಯ ನಟ ಗಣೇಶ್‌ರಾವ್ ಅವರು ಮೂಲತಃ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದವರು. ಅವರು ತಾವು ವ್ಯಾಸಂಗ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಈಗಾಗಲೇ ಶಾಲೆಯಲ್ಲಿ 1-7 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 74 ಮಕ್ಕಳಿಗೆ ಉಚಿತವಾಗಿ ಸಮವಸ ಹಾಗೂ ವಿವಿಧ ಬಗೆಯ ಕಲಿಕಾ ಸಾಮಗ್ರಗಳನ್ನು ವಿತರಣೆ ಮಾಡುತ್ತಾ ಬಂದಿದ್ದರು. ಈಗ ತಂದೆ ಆರ್.ಕೃಷ್ಣರಾವ್ ಹೆಸರಿನಲ್ಲಿ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ನಿರ್ಮಾಣ, ಕಲಿಕಾ ಮತ್ತು ಕ್ರೀಡಾ ಸಾಮಗ್ರಿಗಳು ಹಾಗೂ ಇನ್ನಿತರೆ ಮೂಲಸೌಕರ್ಯವನ್ನು ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಲ್ಲದೇ ಸುಮಾರು 10 ಲಕ್ಷ ರೂ, ವೆಚ್ಚದಲ್ಲಿ ಹುಟ್ಟೂರಿನಲ್ಲಿ ಶ್ರೀಗುರು ಸಿದ್ದೇಶ್ವರ ಬಸವ ದೇವಸ್ಥಾವನ್ನು ಜೀಣೋದ್ಧಾರ ಮಾಡಿದ್ದಾರೆ. ಈ ಮೂಲಕ ಹಿರಿಯ ನಟರೊಬ್ಬರು ಮಾದರಿಯಾಗಿದ್ದಾರೆ.

ೆ.20 ಮತ್ತು 21 ರಂದು ಕಾರ್ಯಕ್ರಮ:

ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಫೆ.21 ರಂದು ಶ್ರೀಗುರುಸಿದ್ದೇಶ್ವರ ಬಸವ ದೇವಸ್ಥಾನದ ಸಂಪ್ರೋಕ್ಷಣಾ, ಕುಂಭಾಭಿಷೇಕ, ಪೂಜಾ ಕಾರ್ಯಕ್ರಮ, ಬಸವ ಮೆರವಣಿಗೆ ಹಾಗೂ ಸರ್ಕಾರಿ ಶಾಲೆಯ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಶ್ರೀಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ದೇವಸ್ಥಾನವನ್ನು ಉದ್ಘಾಟಿಸಲಿದ್ದಾರೆ. ಹೊಂಡರಬಾಳು ಆದಿಗುರು ಶಂಖಿನಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀನೀಲಕಂಠ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀಮಂಜುನಾಥ ಭಾರತಿ ಸ್ವಾಮೀಜಿ ಹಾಗೂ ಇನ್ನಿತರೆ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ:

ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ಹಿರಿಯ ನಟ ಗಣೇಶ್‌ರಾವ್ ಕೇಸರ್ಕರ್ ಸುಮಾರು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಅಭಿನಯದ ಸಾರಥಿ, ವಿಷ್ಣುವರ್ಧನ್ ಅಭಿನಯದ ವಿಷ್ಣುಸೇನಾ, ಮುರಳಿ ಅಭಿನಯದ ಉಗ್ರಂ, ಡಾನ್, ರಾಕ್ಷಸ, ಅಣ್ಣಾವ್ರ, ವರದನಾಯಕ ಹಾಗೂ ಇನ್ನಿತರೆ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹುಟ್ಟೂರಿಗೆ ಸೇವೆ ಸಲ್ಲಿಸುವ ಮತ್ತು ಇನ್ನಿತರರಿಗೆ ಪ್ರೇರಣೆ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಹಿರಿಯ ಚಲನಚಿತ್ರ ನಟ ಗಣೇಶ್‌ರಾವ್ ಅವರು ಸರ್ಕಾರಿ ಶಾಲೆಯ ಮಕ್ಕಳಿಗೆ ಈಗಾಗಲೇ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈಗ ಸಾರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

-ಎಂ.ವಾಸು, ಮುಖ್ಯ ಶಿಕ್ಷಕ, ಸ.ಹಿ.ಪ್ರಾ.ಶಾಲೆ, ಹೊಂಡರಬಾಳು, ಕೊಳ್ಳೇಗಾಲ