ಜಿಲ್ಲೆ

ಸರ್ಕಾರಿ ಶಾಲೆ ದತ್ತು ಪಡೆದು ಅಗತ್ಯ ಸೌಲಭ್ಯ

ಅರಕಲಗೂಡು: ಹೊಳಲಗೋಡು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆ ದತ್ತು ಪಡೆದು, ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದಾಗಿ ಬೆಂಗಳೂರು ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ಭರವಸೆ ನೀಡಿದರು.


ತಾಲೂಕಿನ ಅಬ್ಬೂರು ಮಾಚಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕರು ಉನ್ನತ ಸ್ಥಾನಕ್ಕೇರಿದ್ದು, ಸಮಾಜಕ್ಕೆ ಮಾದರಿಯಾದ ಸೇವೆ ಸಲ್ಲಿಸಿದ್ದಾರೆ.


ನಾನು ಕೂಡ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಪಡೆದೆ. ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿವೆ. ಸರ್ಕಾರದ ಜತೆಗೆ ದಾನಿಗಳು ಸಹ ಸರ್ಕಾರಿ ಶಾಲೆಗಳ ಉನ್ನತಿಗೆ ಕೈಜೋಡಿಸುವುದು ಅನಿವಾರ್ಯವಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದತ್ತು ಪಡೆದ ಶಾಲೆಗೆ ಎಲ್ಲ ಸವತ್ತುಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗುವುದು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು ಮಾತನಾಡಿ, ಮಕ್ಕಳಲ್ಲಿ ಕಲಿಕಾ ಸಾಮಾರ್ಥ್ಯ ಹೆಚ್ಚಿಸಿ ಶಿಕ್ಷಣದ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಶಿಕ್ಷಕರು ವಿಶೇಷ ತರಗತಿಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಪಡೆಯಲು ಶ್ರಮ ವ್ಯಯಿಸಿದ್ದಾರೆ. ಸರ್ಕಾರವು ಬಹಳಷ್ಟು ಸೌಲಭ್ಯಗಳನ್ನು ನೀಡಿದೆ. ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆ ಗಮನಿಸಿ ಉತ್ತಮ ಸಹಕಾರ ನೀಡಬೇಕು ಎಂದರು.


ಕ್ಷೇತ್ರ ಸಮನ್ವಯಾಧಿಕಾರಿ ಬಾಲರಾಜ್, ಎಸ್‌ಡಿಎಂಸಿ ಅಧ್ಯಕ್ಷೆ ಮುಬಿನಾ ಬಾನು ಮಾತನಾಡಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜು,ಮುಖ್ಯ ಶಿಕ್ಷಕರಾದ ಮಂಜುನಾಥ್, ಸಂಧ್ಯಾರಾಣಿ, ನಿವೃತ್ತ ಶಿಕ್ಷಕ ಶಿವರುದ್ರಪ್ಪ, ಗ್ರಾಪಂ ಸದಸ್ಯರಾದ ತಬಸುಂ ಅರಾ, ಗೌರಮ್ಮ, ಮಾಜಿ ಅಧ್ಯಕ್ಷ ಅಲಿಜಾನ್, ಮಾಜಿ ಉಪಾಧ್ಯಕ್ಷ ನಿಂಗೇಗೌಡ, ಮುಖಂಡರಾದ ಜಾಫರ್ ಖಾನ್, ಪಿಫಯಾಜ್, ಅಸ್ಲಾಮ್ ಸಾಬ್, ಪರಮೇಶ್, ಎಸ್‌ಡಿಎಂಸಿ ಸದಸ್ಯರಾದ ಅಬ್ದುಲ್ ರಫೀಕ್, ಅಹಮದ್ ಖಾನ್, ಮಾಜಿ ಅಧ್ಯಕ್ಷ ಮನ್ಸೂರ್ ಅಹಮದ್, ದಸ್ತಗೀರ್, ಮಸೀದಿ ಅಧ್ಯಕ್ಷ ಅಫ್ಜಲ್ ಬೇಗ್ ಇತರರಿದ್ದರು.