ಕಿಕ್ಕೇರಿ: ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸಲು ಮುಂದಾಗುವಂತೆ ಶಾಸಕ ಎಚ್.ಟಿ.ಮಂಜು ಪಾಲಕರಿಗೆ ಸಲಹೆ ನೀಡಿದರು.
ಇಲ್ಲಿನ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಹೈಟೆಕ್ ಆಗಿ ನಿರ್ಮಾಣವಾಗುತ್ತಿವೆ. ವಿವೇಕ ಯೋಜನೆಯಡಿಯಲ್ಲಿ 6ಹಾಗೂ 8ನೇ ಹಂತದಲ್ಲಿ ಇಲ್ಲಿನ ಕಾಲೇಜಿನಲ್ಲಿ ಹೆಚ್ಚುವರಿಯಾಗಿ 75ಲಕ್ಷ ರೂ.ವೆಚ್ಚದಲ್ಲಿ 3 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ತ್ವರಿತವಾಗಿ ಕೊಠಡಿ ನಿರ್ಮಿಸಲು ಗುತ್ತಿಗೆದಾರರು ಗಮನಹರಿಸಿ ಎಂದರು.
ಶಾಲೆ, ಕಾಲೇಜುಗಳು ವಿದ್ಯಾ ದೇಗುಲವಾಗಿವೆ. ದೇಗುಲ ಘಂಟೆಗಿಂತ ಶಾಲೆಯ ಘಂಟೆಗಳು ಹೆಚ್ಚಿನ ಸದ್ದು ಮಾಡಿದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ. ಇಲ್ಲಿನ ಕಾಲೇಜು ಉತ್ತಮ ಪರಿಸರದಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉಪನ್ಯಾಸಕ ಆಯ್ಕೆಯಾಗಿದ್ದಾರೆ. ಸ್ಥಳೀಯ ಕಾಲೇಜು ಉಳಿಸುವುದು ಪಾಲಕರ, ವಿದ್ಯಾರ್ಥಿಗಳ ಕರ್ತವ್ಯ ಎಂದು ತಿಳಿ ಹೇಳಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, ಹೋಬಳಿಯ ಆನೆಗೊಳ ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಪರಿಸರ, ಬೋಧಕ ವೃಂದವಿದೆ. ಕೃಷಿಕರು, ಬಡವರು ಇರುವ ಪ್ರದೇಶ ಎಂದು ಹೋರಾಟ ನಡೆಸಿ ಕಾಲೇಜು ತರಲಾಯಿತು. ಆದರೆ ಮಕ್ಕಳು ತಾಲೂಕು ಕೇಂದ್ರಕ್ಕೆ ಓಡಾಡಬೇಕೆಂಬ ಆಸೆಯಿಂದ ಇಲ್ಲಿನ ಕಾಲೇಜಿಗೆ ದಾಖಲಾಗುತ್ತಿಲ್ಲ. ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುವ ಹಂತದಲ್ಲಿದೆ. ಮಂದಗೆರೆ ಕಾಲೇಜು ಈಗಾಗಲೇ ಮುಚ್ಚಿ ಆಗಿದೆ. ಮಕ್ಕಳು ಚನ್ನರಾಯಪಟ್ಟಣ, ಕೆ.ಆರ್.ಪೇಟೆ ಕಾಲೇಜಿಗೆ ಕಷ್ಟವಾದರೂ ಹೋಗುತ್ತಿದ್ದಾರೆ. ಇನ್ನಾದರೂ ಸರ್ಕಾರಿ ಕಾಲೇಜು ಉಳಿಸಲು ಮುಂದಾಗಿ ಎಂದು ಮನವಿ ಮಾಡಿದರು.
ಬಿಇಒ ವೈ.ಕೆ.ತಿಮ್ಮೇಗೌಡ, ಜೆಡಿಎಸ್ ಹೋ.ಅಧ್ಯಕ್ಷ ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಶೇಖರ್, ದಿನೇಶ್‌ಬಾಬು, ಗ್ರಾಪಂ ಅಧ್ಯಕ್ಷ ಕೆ.ಜಿ. ಪುಟ್ಟರಾಜು, ಮಾಜಿ ಅಧ್ಯಕ್ಷರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್. ರಾಜೇಶ್, ಉಪಾಧ್ಯಕ್ಷೆ ಜ್ಯೋತಿ, ಪ್ರಾಂಶುಪಾಲ ದೊರೆಸ್ವಾಮಿ, ಉಪ ಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಇಸಿಒ ನವೀನ್, ಸಿಆರ್‌ಪಿ ನಾರಾಯಣ್, ಎಸ್.ಎಂ.ಬಸವರಾಜು, ಪ್ರತಾಪ್ ಮತ್ತಿತರರಿದ್ದರು.