ಜಿಲ್ಲೆ

ಸರ್ಕಾರಿ ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ

ಕೊಳ್ಳೇಗಾಲ: ನಾವು ಓದಿದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಲಕ್ಷ್ಮಮ್ಮ ಸೂಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 1102 ಶಾಲೆಗಳಿವೆ. ಇವುಗಳಲ್ಲಿ 805 ಸರ್ಕಾರಿ ಶಾಲೆಗಳಿವೆ. ಸರ್ಕಾರವೇ ಎಲ್ಲವನ್ನೂ ಅಭಿವೃದ್ಧಿಪಡಿಸಲು ಕಷ್ಟವಾಗುತ್ತದೆ. ನಾವು ಓದಿದ ಶಾಲೆಯನ್ನು ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸಗೊಳಿಸುವುದೇ ಶಿಕ್ಷಣ. ಯಾರೂ ಜಾತಿಯಿಂದ ಬುದ್ಧಿವಂತರಾಗಲು ಸಾಧ್ಯವಿಲ್ಲ. ಎಲ್ಲರಿಗೂ ಪ್ರತಿಭಾವಂತರಾಗುವ ಶಕ್ತಿ ಇದೆ. ಅವಕಾಶ ಸಿಗದೆ ಹೋದರೆ ಯಾರೂ ಮೇಲೆ ಬರಲು ಸಾಧ್ಯವಾಗುವುದಿಲ್ಲ. ಎಸ್.ಮರಿಸ್ವಾಮಿ ತನ್ನ ಸ್ವಂತ ಶ್ರಮದಿಂದ ಪೊಲೀಸ್ ಅಧಿಕಾರಿಯಾದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ ಮೇಲೆ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಿವೆ. ಸಂವಿಧಾನ ಬರುವ ಮೊದಲು ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಶಿಕ್ಷಣ ಪ್ರಬಲವಾದ ಅಸ, ಶಿಕ್ಷಣದಿಂದ ವಂಚಿತರಾದವರು ಗೌರವದಿಂದ ಬಾಳಲು ಕಷ್ಟ. ಅದಕ್ಕಾಗಿ ಎಲ್ಲರೂ ವಿದ್ಯಾವಂತರಾಗಬೇಕು ಎಂದರು.

ನಾನು ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿದೆ. ಅದಕ್ಕೆ ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಯೋಜನೆ ಜಾರಿ ಮಾಡಿದೆ. ಅಸಮಾನತೆ ಇರಬಾರದೆಂದು ಶೂ, ಸಮವಸ ಕೊಡುವ ಕೆಲಸ ಮಾಡಿದೆ. ಈಗ ಹಾಲು, ಮಾಲ್ಟ್, ಮೊಟ್ಟೆ, ಚಿಕ್ಕಿ ಕೊಡುತ್ತಿದ್ದೇವೆ. ಯಾರೂ ವಿದ್ಯೆಯಿಂದ ವಂಚಿತರಾಗಬಾರದು. ಆರ್ಥಿಕ ತೊಂದರೆಯಾಗಬಾರದು ಎಂದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಟೀಕೆ ಮಾಡುವವರು ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಿಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆ ಸಿಎಂ ಹಿಂದಿನ ಶಕ್ತಿ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರಿ ಶಾಲೆಯಲ್ಲಿ ಓದಿ ಎರಡನೇ ಬಾರಿಗೆ ಸಿಎಂ ಆಗಿರುವವರು. ಸರ್ಕಾರಿ ಶಾಲೆಗೆ ಆ ಶಕ್ತಿ ಇದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಓದಿದ ಸಿದ್ದರಾಮನಹುಂಡಿ ಶಾಲೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಆ ರೀತಿ ಹಳೆಯ ವಿದ್ಯಾರ್ಥಿಗಳು ಒಮ್ಮೆ ತಮ್ಮ ಶಾಲೆಯನ್ನು ಹಿಂದಿರುಗಿ ನೋಡಬೇಕು. ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ಯಾಗಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಅವರ ಕಾರ್ಯ ಶ್ಲಾಘನೀಯ. ಸತ್ತೇಗಾಲ ಶಾಲೆಯಲ್ಲಿ 217 ಮಕ್ಕಳು ಇರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷ ಮಕ್ಕಳ ಸಂಖ್ಯೆ 400 ಆಗಲಿ. ಆಗ ಮರಿಸ್ವಾಮಿ ಮಾಡಿರುವ ಕಾರ್ಯ ಸಾರ್ಥಕವಾಗುತ್ತದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಮುಖ್ಯರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ನೆರವೇರಿಸಿದರು. ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ಕೆಂಪರಾಜು, ಉಪಾಧ್ಯಕ್ಷೆ ಎಂ.ಎಸ್.ಸುವರ್ಣಾ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜೆ.ಶಾಂತರಾಜು, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಇತರರು ಹಾಜರಿದ್ದರು.

ಊರಲ್ಲಿ ಹಬ್ಬದ ವಾತಾವರಣ

ಸತ್ತೇಗಾಲದಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟನೆ ಮಾಡಲು ಸಿಎಂ ಸಿದ್ದರಾಮಯ್ಯ ಆಗಮಿಸಿದ್ದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಿಎಂಗೆ ಸ್ವಾಗತ ಕೋರಿದ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಶಾಲೆ ಮುಂದೆ ಬ್ಯಾಂಡ್ ಸೆಟ್ ಸದ್ದಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ನೂತನ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಅವರನ್ನು ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಸನ್ಮಾನಿಸುವಾಗ ಗ್ರಾಮಸ್ಥರು ಕೂಗು ಹಾಕಿ, ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಅಭಿಮಾನ ಮೆರೆದರು.

ಗ್ರಾಮಾಭಿವೃದ್ಧಿಗಾಗಿ ಮನವಿ ಇಟ್ಟ ಮರಿಸ್ವಾಮಿ

2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಟ್ಟಿರುವ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಸ್.ಮರಿಸ್ವಾಮಿ ಸತ್ತೇಗಾಲದ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು.

ಜಿಲ್ಲೆಯ ಅಂಚಿನಲ್ಲಿರುವ ಸತ್ತೇಗಾಲ ಗ್ರಾಮ ದೊಡ್ಡ ಹಳ್ಳಿ. ಬೇರೆ ಕಡೆ ಈ ಗ್ರಾಮ ಇದ್ದಿದ್ದರೆ ಬಹಳ ದೊಡ್ಡದಾಗಿ ಬೆಳೆಯುತ್ತಿತ್ತು. ಗ್ರಾಮದ ರೈತರು ಭೂಮಿ ಪರಭಾರೆ ಮಾಡಲು ಸಾಧ್ಯವಾಗುತ್ತಿಲ್ಲ. ಧನಗೆರೆ ಕಟ್ಟೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದೆ ರೈತರಿಗೆ ತೊಂದರೆಯಾಗುತ್ತಿದೆ. ಏತ ನೀರಾವರಿ ಯೋಜನೆ ಮಾಡಬೇಕಾಗಿರುವ ಅವಶ್ಯಕತೆ ಇದೆ. ಜನಸಂಖ್ಯೆ ಹೆಚ್ಚಾಗಿರುವುದರಿಂದ ಪಾಲಿಟೆಕ್ನಿಕ್, ಕೈಗಾರಿಕೆ ಸ್ಥಾಪನೆಯಾಗಬೇಕಿದೆ ಎಂದು ಮನವಿ ಮಾಡಿದರು. ಇದೇ ವೇಳೆ ಎಸ್.ಮರಿಸ್ವಾಮಿ, ಪತ್ನಿ ಪದ್ಮಾವತಿ ಮತ್ತು ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಕೊಟ್ಟವರನ್ನು ಸನ್ಮಾನಿಸಲಾಯಿತು. ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ ಮತ್ತು ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ: ಸತ್ತೇಗಾಲ ಗ್ರಾಮದಲ್ಲಿ 18 ಸಾವಿರ ಜನಸಂಖ್ಯೆ ಇದೆ. 14 ಸಾವಿರ ಮತದಾರರೇ ಇದ್ದಾರೆ ಎಂದು ತಿಳಿಯಿತು. ಸತ್ತೇಗಾಲ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ನೀಡಿದ ಮನವಿ ಪತ್ರ ಗಮನಿಸಿ ನೀರಿನ ಲಭ್ಯತೆ ಇದ್ದರೆ ಧನಗೆರೆಯಿಂದ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು ಎಂದರು.

ಸರ್ಕಾರಿ ಶಾಲೆಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಟ್ಟ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಅವರ ಕಾರ್ಯ ಶ್ಲಾಘನೀಯ. ರಾಜ್ಯದ ಉದ್ದಗಲಕ್ಕೂ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ಅಭಿವೃದ್ಧಿ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಓದಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಜನರ ಕಷ್ಟ-ಸುಖಗಳು ಗೊತ್ತಿರುವುದಕ್ಕೆ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ಹನೂರು ಭೌಗೋಳಿಕವಾಗಿ ದೊಡ್ಡ ಕ್ಷೇತ್ರ. ಸಿಎಂ ಸಿದ್ದರಾಮಯ್ಯ ಅವರಿಗೆ ನಮ್ಮ ರೈತರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಬೇಕು. ಈ ಮೂಲಕ ಹಿಂದುಳಿದಿರುವ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸುತ್ತೇನೆ. ಎಂ.ಆರ್.ಮಂಜುನಾಥ್, ಶಾಸಕ, ಹನೂರು