ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳ ಬಾಗಿಲು ಮುಚ್ಚಿವೆ, ಆದರೆ ಸರ್ಕಾರಿ ಶಾಲೆಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ‘ವಿದ್ಯಾಗಮ’ಯೋಜನೆ ಮೂಲಕ ಶಿಕ್ಷಕರು-ಮಕ್ಕಳನ್ನು ಸಮಾಗಮ ಗೊಳಿಸಲಾಗಿದ್ದು, ಕಲಿಕೆ ಸುಗಮಗೊಳಿಸಲಾಗಿದೆ.
ಆ.31ರವರೆಗೆ ಶಾಲೆಗಳ ಬಾಗಿಲು ಮುಚ್ಚಲು ಸರ್ಕಾರ ನಿರ್ದೇಶಿಸಿದೆ. ಇದರ ನಡುವೆ ಖಾಸಗಿ ಶಾಲೆಗಳು ಮಕ್ಕಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ, ಅದರಂತೆ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ತಪ್ಪಿಸಲು, ದಾಖಲಾತಿ ಮತ್ತು ನಿರಂತರ ಕಲಿಕೆಗೆ ಪರ್ಯಾಯವಾಗಿ ವಿದ್ಯಾಗಮ ಯೋಜನೆ ಜಾರಿಗೆ ತರಲಾಗಿದೆ.
ಯೋಜನೆಯಡಿ ಶಾಲಾ ಶಿಕ್ಷಕರು ಗ್ರಾಮಗಳಿಗೆ ತೆರಳಿ ಸರ್ಕಾರಿ ಕಟ್ಟಡ ಇಲ್ಲವೇ ಬಯಲು ಪ್ರದೇಶದಲ್ಲಿ ಪಾಠ ಮಾಡುತ್ತಿದ್ದಾರೆ, ಕಲಿಕಾಭ್ಯಾಸ, ಮನೆಪಾಠ ಮತ್ತು ಚಂದನ ವಾಹಿನಿಯ ಪಾಠಗಳ ಗ್ರಹಿಕೆ ಜತೆಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿದ್ದಾರೆ.
ಜಿಲ್ಲೆಯಲ್ಲಿ 1400 ಪ್ರಾಥಮಿಕ ಶಾಲೆ, 153 ಪ್ರೌಢಶಾಲೆ ಮತ್ತು 18 ವಸತಿ ಶಾಲೆಗಳ ವ್ಯಾಪ್ತಿಯಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು 1ರಿಂದ 5ನೇ ತರಗತಿ, 6ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಮಕ್ಕಳ ವಾಸಸ್ಥಳದ ಭೌಗೋಳಿಕ ಪ್ರದೇಶ ಆಧರಿಸಿ, ನೆರೆಹೊರೆ ಗ್ರಾಮದ ಲೆಕ್ಕದಲ್ಲಿ ಪ್ರತ್ಯೇಕವಾಗಿ ಗುಂಪುಗಳನ್ನು ರಚಿಸಿಕೊಂಡಿದ್ದು ಕನಿಷ್ಠ 20ರಿಂದ 25 ಮಕ್ಕಳಿಗೆ ತಲಾ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ, ನಿರ್ದಿಷ್ಟ ಗ್ರಾಮಗಳ ಜವಾಬ್ದಾರಿ ನೀಡಲಾಗಿದೆ.
ವಿಷಯವಾರು ಶಿಕ್ಷಕರು ವಾರಕ್ಕೆ ಮೂರು ಬಾರಿ ಗ್ರಾಮಗಳಿಗೆ ತೆರಳಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಪಾಠ ಪ್ರವಚನ, ಮಾರ್ಗದರ್ಶನ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಹೊಸ ಮಕ್ಕಳ ದಾಖಲಾತಿಗೂ ಆದ್ಯತೆ ನೀಡಲಾಗುತ್ತಿದೆ.
ವಲಯ ವಿಂಗಡಣೆ: ಮೊಬೈಲ್ ರಹಿತ ಮಕ್ಕಳು, ಮೊಬೈಲ್ ಇದ್ದರೂ ಅಂತರ್ಜಾಲ ಸಂಪರ್ಕ ಇಲ್ಲದಿರುವ ಮಕ್ಕಳು, ಮೊಬೈಲ್ ಮತ್ತು ಆನ್‌ಲೈನ್ ವ್ಯವಸ್ಥೆ ಹೊಂದಿರುವ ಮಕ್ಕಳು ಎಂಬ ಮೂರು ವಲಯದ ಮಕ್ಕಳನ್ನು ಗುರುತಿಸಲಾಗಿದೆ. ಮೊಬೈಲ್ ಇಲ್ಲದ ಮಕ್ಕಳನ್ನು ನಿರ್ದಿಷ್ಟ ಸಮಯದಲ್ಲಿ ಪರಸ್ಪರ ಅಂತರದಲ್ಲಿ ಕೂಡ್ರಿಸಿ ಬೋಧಿಸಲಾಗುತ್ತದೆ. ಕಡಿಮೆ ಅವಧಿಗೆ ತರಗತಿಗಳನ್ನು ನಡೆಸಲಾಗುತ್ತದೆ.
ಇಂಟರ್‌ನೆಟ್ ರಹಿತ ಮೊಬೈಲ್ ಹೊಂದಿರುವ ಮಕ್ಕಳಿಗೆ ಬೆಳಗ್ಗೆ 9ರೊಳಗೆ ಇಲ್ಲವೇ ಸಂಜೆ 6ರ ನಂತರ ಕರೆ ಮಾಡಿ ಮಾತನಾಡುವಿಕೆ, ಎಸ್‌ಎಂಎಸ್ ಮತ್ತು ವಾಯ್ಸ ಮೆಸೇಜ್ ಮೂಲಕ ಮಾರ್ಗದರ್ಶನ ನೀಡಲಾಗುತ್ತ್ತದೆ. ಇಂಟರ್‌ನೆಟ್ ಸಹಿತ ಕಂಪ್ಯೂಟರ್, ಟ್ಯಾಬ್, ಸ್ಮಾರ್ಟ್ ಫೋನ್ ಹೊಂದಿರುವ ಮಕ್ಕಳಿಗೆ ಜೂಮ್/ಸಿಸ್ಕೋ ವೆಬೆಕ್ಸ್/ಗೂಗಲ್ ಕ್ಲಾಸ್ ರೂಮ್ ಮೂಲಕ ಆನ್ ಲೈನ್ ತರಗತಿ ನಡೆಸಲಾಗುತ್ತದೆ.
ವೀಕ್ಷಣೆ, ಗ್ರಹಿಕೆ ಮೇಲೆ ನಿಗಾ: ವಾರಕ್ಕೊಮ್ಮೆ ಭೇಟಿ ಕಡ್ಡಾಯ
ಮೂರು ವಲಯಗಳಲ್ಲೂ ಶಿಕ್ಷಕರಿಗೆ ವಾರಕ್ಕೊಮ್ಮೆ ಮಕ್ಕಳ ಭೇಟಿ ಕಡ್ಡಾಯವಾಗಿದೆ. ಇನ್ನೂ ಚಂದನ ವಾಹಿನಿ, ಯು ಟ್ಯೂಬ್ ಮೂಲಕ 1ರಿಂದ 10ನೇ ತರಗತಿಯವರೆಗಿನ ನಿಗದಿತ ವೇಳಾಪಟ್ಟಿಯಂತೆ ಶಿಕ್ಷಕರ ಬೋಧನೆಯ ಪಾಠ ಪ್ರಸಾರ ಮಾಡುತ್ತಿದ್ದು, ಇದರ ವೀಕ್ಷಣೆ, ಗ್ರಹಿಕೆಯ ಮೇಲೆಯೂ ನಿಗಾವಹಿಸಲಾಗುತ್ತದೆ.
ಯೋಜನೆಯ ಉದ್ದೇಶ : ಪ್ರತಿ ಮಗುವಿನ ಭವಿಷ್ಯದ ಕನಸನ್ನು ನನಸಾಗಿಸಲು ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ಸೇರಿ ಇತರ ಅಡಚಣೆಗಳು ಅಡ್ಡಿಯಾಗದಂತೆ ನಿರಂತರ ಕಲಿಕಾ ಕಾರ್ಯಕ್ರಮವೇ ವಿದ್ಯಾಗಮ ಯೋಜನೆ ಉದ್ದೇಶ. ಇದು ಶಾಲೆಗಳು ಪ್ರಾರಂಭವಾಗುವವರೆಗೂ ಮಕ್ಕಳೊಂದಿಗೆ ಶಿಕ್ಷಕರ ಸಂಪರ್ಕ, ನಿರಂತರ ಕಲಿಕೆ, ಪಠ್ಯಪುಸ್ತಕ ಮತ್ತು ಕಲಿಕಾ ಪರಿಕರಗಳ ವಿತರಣೆ, ಬಾಲಕಾರ್ಮಿಕ ಮತ್ತು ಬಾಲ್ಯ ವಿವಾಹ ಸೇರಿ ಇತರ ಸಾಮಾಜಿಕ ಪಿಡುಗಗಳಿಗೆ ಮಕ್ಕಳು ಬಲಿಯಾಗುವುದನ್ನು ತಪ್ಪಿಸುವುದು ಮತ್ತು ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿಪಡಿಸಿಕೊಳ್ಳುವಿಕೆಗೆ ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ವಿದ್ಯಾಗಮ ಯೋಜನೆಯಡಿ 1ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಮಕ್ಕಳಿಗೆ ಶಿಕ್ಷಕರು ನೇರ ಬೋಧನೆ, ಪರ್ಯಾಯ ವ್ಯವಸ್ಥೆ, ತಂತ್ರಜ್ಞಾನ ಸಾಧನಗಳ ಮೂಲಕ ಕಲಿಕೆ ನೀಡುತ್ತಿದ್ದಾರೆ. ಶಾಲೆಗಳು ಪ್ರಾರಂಭವಾಗುವವರೆಗೂ ಈ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತದೆ. ಎಸ್.ಜಿ.ನಾಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಚಿಕ್ಕಬಳ್ಳಾಪುರ