ಜಿಲ್ಲೆ

ಸರ್ಕಾರಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ವಿಜ್ಞಾನ ಮೇಳ

ಮೈಸೂರು: ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ನೇತೃತ್ವದಲ್ಲಿ ಅಗಸ್ತ್ಯ ಫೌಂಡೇಷನ್ ಸಹಕಾರದೊಂದಿಗೆ ಮೂಲ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಸೋಮವಾರ ‘ವಿಜ್ಞಾನ ಮೇಳ’ ಆಯೋಜಿಸಲಾಗಿತ್ತು.
ವಿಜ್ಞಾನದ ವಿವಿಧ ಶಾಖೆಗಳಾದ ಭೌತ, ರಸಾಯನ, ಜೀವ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಸೂರ, ದರ್ಪಣ, ಕೆಲಿಡಿಯೋಸ್ಕೋಪ್, ಪೆರಿಸ್ಕೋಪ್, ಗುರುತ್ವ ಕೇಂದ್ರ, ಸ್ಟೆಥಾಸ್ಕೋಪ್, ಅಸ್ಥಿಪಂಜರ, ನರವ್ಯೆಹ, ಕಣ್ಣು ಯಕೃತ್, ಹೃದಯ, ಮೂತ್ರಪಿಂಡ, ಕಿವಿ, ಜೀರ್ಣಾಂಗ ವ್ಯೆಹ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಬೆಳಕಿನ ಪಾರ್ಶ್ವ ಪಲ್ಲಟ, ಪ್ರತಿಫಲನ, ಪರಿಭ್ರಮಣೆಯ ಸಮತಲ, ಪತನ ಮತ್ತು ಪ್ರತಿಫಲನ ಕೋನ, ತಳವಿಲ್ಲದ ಬಾವಿ, ಶಬ್ದದ ಅಲೆಗಳ ಮಾದರಿ, ಬೆಳಕಿನ ಬಹುಪ್ರತಿಫಲನ, ಹ್ಯಾಂಡ್ ಬ್ಯಾಟರಿ, ಎಸಿ ಮತ್ತು ಡಿಸಿ ಡೈನಮೊ ಮೊದಲಾದ ವಿಜ್ಞಾನದ ಸಾಮಗ್ರಿಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳು ವಿಷಯ ವಿವರಣೆ ನೀಡಿದರು.
ವಲಯ ಸಂಪನ್ಮೂಲ ವ್ಯಕ್ತಿ ಪಿ.ಕೆ.ದೀಪು ವಿಜ್ಞಾನ ಮೇಳಕ್ಕೆ ಚಾಲನೆ ನೀಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ, ಮುಖ್ಯ ಶಿಕ್ಷಕಿ ಕೆ.ವಿ.ಪುಷ್ಪಲತಾ, ಅಗಸ್ತ್ಯ ಫೌಂಡೇಷನ್ ಸಂಪನ್ಮೂಲ ಶಿಕ್ಷಕ ಮಹಾಲಿಂಗಯ್ಯ, ವಿಜ್ಞಾನ ಶಿಕ್ಷಕಿಯರಾದ ಪಿ.ಎನ್.ವೀಣಾ, ಎನ್.ಆರ್.ಸುಜಾತಾ, ಪಿ.ಎಲ್.ಭಾಗ್ಯಾ ಇತರರು ಇದ್ದರು.
ಹಾರೋಹಳ್ಳಿ ಕಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಮೆಲ್ಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ವಿಜ್ಞಾನ ಮೇಳದಲ್ಲಿನ ವಸ್ತುಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದರು. ವಿಜ್ಞಾನದ ಹಲವು ಮೂಲ ವಿಷಯಗಳನ್ನು ಮನದಟ್ಟು ಮಾಡುವಲ್ಲಿ ಮೇಳವು ಸಫಲವಾಯಿತು.