ಜಿಲ್ಲೆ

ಸರ್ಕಾರಿ ಶಾಲಾ ಮಕ್ಕಳಲ್ಲಿ ಕ್ರಿಯಾತ್ಮಕತೆ ಹೆಚ್ಚು, ಯುವ ಸೇನೆ ಸಂಘಟನೆ ಮುಖ್ಯಸ್ಥ ಡಾ. ಅಭಿಷೇಕ್ ಅಭಿಮತ

ಹೊಸಕೋಟೆ: ಸರ್ಕಾರಿ ಶಾಲಾ ಮಕ್ಕಳಲ್ಲಿ ಕ್ರಿಯಾತ್ಮಕ ಆಲೋಚನೆ ಹಾಗೂ ಸಾಮಾಜಿಕ ಕಳಕಳಿ ಹೆಚ್ಚು ಎಂದು ಎಂದು ಓವಂ ಆಸ್ಪತ್ರೆ ವೈದ್ಯ ಹಾಗೂ ಯುವ ಸೇನೆ ಸಂಘಟನೆ ಮುಖ್ಯಸ್ಥ ಡಾ. ಅಭಿಷೇಕ್ ತಿಳಿಸಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಓವಂ ಮಕ್ಕಳ ಆಸ್ಪತ್ರೆ, ಶಿಕ್ಷಣ ಇಲಾಖೆ, ಯುವ ಸೇನೆ ಸಂಘಟನೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಮಾತನಾಡಿದರು.

ನಮ್ಮ ತಂಡದ ಪ್ರತಿಯೊಬ್ಬರೂ ಸರ್ಕಾರಿ ಶಾಲೆಯಲ್ಲಿ ಕಲಿತು ಇಂದು ಉತ್ತಮ ಸ್ಥಾನದಲ್ಲಿದ್ದು, ಸರ್ಕಾರಿ ಶಾಲಾ ಮಕ್ಕಳಲ್ಲಿ ಹೆಚ್ಚಿನ ಕಲಿಕಾ ಸಾಮರ್ಥ್ಯ ಇದೆ ಎಂದು ತೋರಿಸುವ ನಿಟ್ಟಿನಲ್ಲಿ ಯುವ ಸೇನಾ ಸಂಸ್ಥೆ ಸ್ಥಾಪಿಸಿ, ಮಕ್ಕಳಲ್ಲಿನ ಆಸಕ್ತಿ ಹಾಗೂ ಅವರ ಕನಸನ್ನು ಸಾಕಾರಗೊಳಿಸುವ ಪ್ರಯತ್ನವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸ್ಪರ್ಧೆ ತೀರ್ಪುಗಾರ ಡಾ. ಪ್ರವೀಣ್ ವೆಂಕಟಗಿರಿ ಮಾತನಾಡಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ವಿಚಾರಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ತೀರ್ಪುಗಾರ, ಬೋಶ್ಚ್ ಸಂಸ್ಥೆಯ ಚಾಲಕ ರಹಿತ ವಾಹನ ಅನ್ವೇಷಣೆ ತಂಡದ ಇಂಜಿನಿಯರ್ ಮಾಧುರಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಆಸಕ್ತಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಎಲ್ಲರಿಗೂ ಮಾದರಿ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ವಿಚಾರಗಳು ದೊರೆಯಲಿದ್ದು, ಶಿಕ್ಷಕರಿಂದ ಮಾತ್ರ ಉತ್ತರ ನಿರೀಕ್ಷಿಸದೆ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.

ಯುವ ಭಾರತಕ್ಕೆ ಕೊಡುಗೆ ವಿಚಾರವಾಗಿ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ಆನ್‌ಲೈನ್ ಮೂಲಕ ತಾಲೂಕಿನ 20 ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ವಿಭಾಗದಲ್ಲಿ ಕುಂಬಳಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಚೈತ್ರಾ ಪ್ರಥಮ, ತಾವರೆಕೆರೆ ಎಸ್.ಎಂ. ಶಾಲೆಯ ಮೇಘಾ ದ್ವಿತೀಯ ಹಾಗೂ ಆಂಗ್ಲ ವಿಭಾಗದಲ್ಲಿ ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸನಾ ಎಸ್. ಹುಸ್ಸೇನ್ ಮೊದಲ, ಹೊಸಕೋಟೆಯ ಮಿಲೇನಿಯಂ ಶಾಲೆಯ ಲಕ್ಷಿತಾ ಶ್ರೀಧರ್ ದ್ವಿತೀಯ ಸ್ಥಾನ ಪಡೆದರು ಹಾಗೂ ತಾಲೂಕಿನ ಕುಂಬಳ ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ನೀಡಲಾಯಿತು.

ತೀರ್ಪುಗಾರ ಎಸ್.ಸಿ. ಮಂಜುನಾಥ, ಯುವಸೇನೆ ತಂಡದ ಅಸೆಂಚರ್ ಸಂಸ್ಥೆಯ ವ್ಯವಸ್ಥಾಪಕ ವಿವೇಕ್, ವಿಪ್ರೋ ಸಂಸ್ಥೆ ಸಿಬ್ಬಂದಿ ವಿಶ್ವಾಸ್ ಜೆ., ಮಧುಸೂದನ್, ಐಬಿಎಂ ಸಂಸ್ಥೆ ಸಿಬ್ಬಂದಿ ವಿಕಾಸ್ ಆರಾಧ್ಯ ಇತರರು ಹಾಜರಿದ್ದರು.