ಹಾಸನ: ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳು ಹಲವು ಕೌಶಲಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಮೊಸಳೆ ಹೊಸಳ್ಳಿ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ.ಇ. ರಘು ಹೇಳಿದರು.
ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಕವಿಜ್ಞಾನ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಒಳ್ಳೆಯ ಮನಸ್ಥಿತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಇಂದಿನ ವಿದ್ಯಾರ್ಥಿಗಳ ಸಮಯಪ್ರಜ್ಞೆ ಇಟ್ಟುಕೊಂಡು ಮುನ್ನಡೆಯಬೇಕು. ಕಲಿಯುವುದನ್ನು ಆಸಕ್ತಿ ಮತ್ತು ಶ್ರದ್ಧೆಯಿಂದ ಕಲಿತರೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಮಾಡದೆ ಪದವಿ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುವುದರ ಮೂಲಕ ಹೆಣ್ಣು ಮಕ್ಕಳು ತಮ್ಮ ಜೀವನ ಕಟ್ಟಿಕೊಳ್ಳಬೇಕು. ತಾವುಗಳು ಕಲಿಯುವ ಜ್ಞಾನ, ವಿಷಯವನ್ನು ಇತರರಿಗೆ ಹಂಚಿಕೊಳ್ಳುವ ಮೂಲಕ ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಬೇಕು. ಗಣಕ ವಿಜ್ಞಾನ ಕ್ಷೇತ್ರದಲ್ಲಿ ದಿನೇದಿನೆ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಹೀಗಿರುವಾಗ ಗಣಕ ವಿಜ್ಞಾನದ ವಿದ್ಯಾರ್ಥಿಗಳು ಆಧುನಿಕ ಕಾಲಘಟ್ಟಕ್ಕೆ ಹೊಂದಿಕೊಳ್ಳುವ ಎಲ್ಲ ವಿಷಯ ಜ್ಞಾನ ಪಡೆದುಕೊಳ್ಳಬೇಕು. ಗಣಕ ವಿಜ್ಞಾನ ಇತ್ತೀಚೆಗೆ ಬೇಡಿಕೆ ಇರುವ ವಿಷಯವಾಗಿದ್ದು, ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡುವುದರ ಮೂಲಕ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನದಲ್ಲಿ ಓದುವ ಛಲ ಮೈಗೂಡಿಸಿಕೊಂಡರೆ ಮಾತ್ರ ಉತ್ತಮವಾಗಿ ಅಧ್ಯಯನ ಮಾಡಲು ಸಾಧ್ಯ. ವಿದ್ಯಾಭ್ಯಾಸದ ಸಮಯದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನ ಮಾಡಿದರೆ ತಾವುಗಳು ಕಂಡಿರುವ ಕನಸನ್ನು ನನಸು ಮಾಡಿಕೊಳ್ಳಬಹುದು. ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಬೇಕಾದರೆ ಉತ್ತಮ ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆಗಳಿಗೆ ಏರಬೇಕು. ಇಂದು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿರುತ್ತವೆ. ಅವುಗಳಿಗೆ ಸಿದ್ಧರಾಗುವ ಮೂಲಕ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಪತ್ರಿಕೆಗಳನ್ನು ಇಡಲಾಗಿದ್ದು, ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಜಿ.ಆರ್. ಮೋಹನ್ ಕುಮಾರ್, ಅಧ್ಯಾಪಕರಾದ ಸುನೀತಾ, ಉಪನ್ಯಾಸಕರಾದ ರಮೇಶ್, ಸಂದೀಪ್, ತೇಜಸ್, ಚೈತ್ರಾಮ ವರ್ಷಿತಾ, ಪ್ರಿಯಾಂಕಾ, ಗೀತಾಂಜಲಿ ಹಾಗು ಇತರರು ಹಾಜರಿದ್ದರು.