ಹಾಸನ: ಸರ್ಕಾರಿ ಶಾಲಾ-ಕಾಲೇಜುಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅವುಗಳ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಇಂದಿನ ಅನೇಕ ಗಣ್ಯರು, ಅಧಿಕಾರಿಗಳು ಎಲ್ಲರೂ ಈ ಹಿಂದೆ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿಯೇ ಓದಿಯೇ ಇಂದು ಉತ್ತಮ ವ್ಯಕ್ತಿಗಳಾಗಿದ್ದಾರೆ ಎಂದು ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ ಉಪಾಧ್ಯಕ್ಷ ಡಾ.ಟಿ.ಎಚ್. ಅಂಜನಪ್ಪ ಹೇಳಿದರು.
ನಗರದ ಆರ್.ಸಿ. ರಸ್ತೆಯ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ 2023-24ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಅತ್ಯಂತ ಶಕ್ತಿಶಾಲಿ ಅಸ್ತ್ರ ಅಂದರೆ ಅದು ಶಿಕ್ಷಣ. ಶಿಕ್ಷಕರು ಈ ಸಮಾಜದ ಬೆನ್ನೆಲುಬು. ಇಂದು ವಿದ್ಯೆ, ಶಿಕ್ಷಣಕ್ಕೆ ಹೆಚ್ಚು ಮೌಲ್ಯವಿದ್ದು, ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರು, ಅಧ್ಯಾಪಕರ ಮೇಲಿದೆ ಎಂದು ತಿಳಿಸಿದರು.
ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಹಲವು ಬದಲಾವಣೆಗಳಾಗಿವೆ. ಮೂಲಭೂತ ಸೌಲಭ್ಯಗಳಿಂದ ಹಿಡಿದು ವೈಜ್ಞಾನಿಕವಾಗಿ ಹಲವು ಬದಲಾವಣೆ ಆಗಿವೆ. ಯುವ ಸಮುದಾಯ ಇಂದಿನ ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಎಲ್ಲರೂ ಅಂಬಾನಿ ತರ ಶ್ರೀಮಂತರಾಗಲು ಸಾಧ್ಯವಿದೆ. ಅದಕ್ಕೆ ಕಷ್ಟಪಟ್ಟ ಓದಬೇಕು. ಅಂಬಾನಿ ಮಗ ಅಮೆರಿಕಾದಲ್ಲಿ ಎಂಜಿನಿಯರಿಂಗ್ ಮಾಡುವುದು ದೊಡ್ಡ ವಿಷಯವಲ್ಲ. ಬದಲಾಗಿ ಹಳ್ಳಿಯ ಕೃಷಿಕರ ಮಕ್ಕಳು ವೈದ್ಯರಾಗುವುದು, ಎಂಜಿನಿಯರ್ ಆಗುವುದು, ದೊಡ್ಡ ದೊಡ್ಡ ಅಧಿಕಾರಿಗಳಾವುದು ದೊಡ್ಡ ವಿಷಯ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಅದನ್ನು ಜನ ಸಾಮಾನ್ಯರು ಬಳಸಿಕೊಳ್ಳಬೇಕು. ಹಾಗಾಗಿ ಇಂದಿನ ಮಕ್ಕಳು ಸರ್ಕಾರಿ ಸಂಸ್ಥೆಗಳ ಬಗ್ಗೆ ಗೌರವದಿಂದ ಕಾಣಬೇಕು ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿದರೆ ಕೀಳು, ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮೇಲು ಎಂಬುವುದೆಲ್ಲಾ ಸುಳ್ಳು. ವಿದ್ಯಾರ್ಥಿಗಳು ಯಾವುದೇ ವಿಷಯವನ್ನಾಗಲಿ ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಸಾಧನೆ ಮಾಡಬಹುದು. ಪಠ್ಯದ ಜತೆಗೆ ಸಮಾಜದಲ್ಲಿ ನಡೆಯುವ ಆಗು-ಹೋಗುಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು. ಜೀವನದಲ್ಲಿ ಸದಾ ಖುಷಿಯಿಂದ ಮನುಷ್ಯ ಬದುಕಬೇಕು. ಸದಾಶಯದಿಂದ ಬದುಕಿದರೆ ಯಾವುದೇ ಕಷ್ಟದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಹೆಣ್ಣು ಮಕ್ಕಳು ಧೈರ್ಯದಿಂದ ಇರಬೇಕು. ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಬೇಕು. ಆರೋಗ್ಯದ ವಿಚಾರದಲ್ಲಿ ವೈದ್ಯರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ಯಾವುದೇ ಕಾಯಿಲೆ ಇದ್ದರೂ ಗುಣಮುಖ ಮಾಡಿಕೊಳ್ಳಬಹುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಎಚ್.ಕೆ. ದಿಲೀಪ್ ಕುಮಾರ್ ಹಾಗೂ ಸಿ.ಪಿ. ಕಾವ್ಯಾ ಅವರ ಮಾರ್ಗದರ್ಶನದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯರು ಸಿದ್ಧಪಡಿಸಿದ್ದ ಶ್ರೀಗಂಧ ವಾಹಿನಿ ಪತ್ರಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ, ಪರಿಷತ್ ಜಿಲ್ಲಾಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಅಧ್ಯಾಪಕರಾದ ಡಾ.ಎಚ್.ಇ. ಸಾವಿತ್ರಿ, ಎಂ.ವಿ. ಹೇಮಾವತಿ, ಡಾ.ಸಿ.ಎಲ್. ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.