ಹಾಸನ: ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದಿರುವ 63 ಇಲಾಖೆಗಳ ಒಟ್ಟು 326 ಕೋಟಿ ರೂ. ಅನುದಾನ ಬಿಡುಗಡೆ ಮಾಡದೆ ಜಿಲ್ಲಾ ಖಜಾನೆಯನ್ನೇ ಬಂದ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ತಿಂಗಳಿಂದ ಅಧಿಕಾರಿಗಳಿಗೂ ಸಂಬಳ ನೀಡಿಲ್ಲ. ಸರ್ಕಾರಿ ವಾಹನಗಳಿಗೆ ಡೀಸೆಲ್ ಹಾಕಿಸಲು ಹಣ ಇಲ್ಲದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. 2 ಸಾವಿರ ಬಿಲ್‌ಗಳು ಬಾಕಿ ಉಳಿದಿವೆ ಎಂದು ದೂರಿದರು.
ಹಾಸನ ನಗರದಲ್ಲಿ ಒಟ್ಟು 101 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ 34 ಕೋಟಿ ರೂ. ರಾಜ್ಯ ಸರ್ಕಾರದ 67 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಹಿಂದೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ದೇವೇಗೌಡರು ಪತ್ರ ಬರೆದು ಒತ್ತಾಯ ಮಾಡಿದ ಕಾರಣದಿಂದ ಇದೀಗ ಬಾಕಿ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಮೇಲ್ಸೇತುವೆ ಅನುದಾನ ತರುವಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಶ್ರಮವಿದೆ. ರಾಜ್ಯ ಬಜೆಟ್‌ಗೂ ಮೊದಲೇ ಕಾಮಗಾರಿಗೆ ಹಣ ನೀಡಿ ಎಂದು ದೇವೇಗೌಡರು ದನಿ ಎತ್ತಿದ್ದರ ಫಲವಾಗಿ ಅನುದಾನ ಬಿಡುಗಡೆಯಾಗಿದೆ ಎಂದು ಪರೋಕ್ಷವಾಗಿ ಸಂಸದ ಶ್ರೇಯಸ್ ಪಟೇಲ್ ಅವರ ಹೇಳಿಕೆ ತಿರುಗೇಟು ನೀಡಿದರು.
ನನಗೆ ಬಜೆಟ್ ಪ್ರತಿ ಓದಲು ಬರುವುದಿಲ್ಲ. ರಾಜ್ಯ ಬಜೆಟ್‌ನಲ್ಲಿ ಹಾಸನಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಾಸನ ನಗರಸಭೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ಹಿಂದಿನ ಸರ್ಕಾರದ ಅವಧಿಯಲೇ ಆಗಿತ್ತು. ಈ ಬಜೆಟ್‌ನಲ್ಲಿ ಯಾವುದೇ ರೀತಿಯ ಅನುದಾನ ನೀಡಿಲ್ಲ. ಬಜೆಟ್ ಬುಕ್‌ನಲ್ಲಿ ಹಾಸನ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ತಿಳಿಸಲಿ ಎಂದು ಸಂಸದರ ಹೆಸರು ಹೇಳದೆಯೇ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಂಬಳದ ರೂಪದಲ್ಲಿ ನೀಡುತ್ತಿದೆ. ಇದಕ್ಕಾಗಿ ವಾರ್ಷಿಕವಾಗಿ 16 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ ನೀಡುವುದಾದರೆ ಕಾಂಗ್ರೆಸ್‌ನಿಂದಲೇ ನೀಡಲಿ. ಸಾರ್ವಜನಿಕರ ತೆರಿಗೆ ಹಣವನ್ನು ಏಕೆ ದುರ್ಬಳಕೆ ಮಾಡಿಕೊಳ್ಳಬೇಕು. ಆನ್‌ಲೈನ್ ಮೂಲಕವೇ ಗ್ಯಾರಂಟಿ ಯೋಜನೆ ನಿರ್ವಹಣೆಯಾಗುತ್ತಿರುವಾಗ ಸಮಿತಿ ಏಕೆ ಬೇಕೆಂದು ರೇವಣ್ಣ ಪ್ರಶ್ನಿಸಿದರು.