ಜಿಲ್ಲೆ

ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

Chitradurga - Desk - Pranav Kumar

ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಿಶ್ಚಿಯನ್, ಮುಸ್ಲಿಂ, ಸಿಖ್, ಜೈನ್, ಬೌದ್ಧ, ಪಾರ್ಸಿ ಸೇರಿ ಅಲ್ಪಸಂಖ್ಯಾತ ಸಮುದಾಯದ ಏಳ್ಗೆಗಾಗಿ ಅನೇಕ ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಸಲಹೆ ನೀಡಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫೃ್ ಇಲಾಖೆ, ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತ ಸಮುದಾಯದವರ ಕುಂದು-ಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ, ವಿವಿಧ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳಲ್ಲಿ ಶೇ 15ರಷ್ಟು ಅಲ್ಪಸಂಖ್ಯಾತರ ವರ್ಗಕ್ಕೆ ನೀಡಬೇಕೆಂಬ ನಿಯಮವಿದೆ. ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಉಂಟಾದಾಗ, ಅಲ್ಪಸಂಖ್ಯಾತರ ಆಯೋಗವು ರಕ್ಷಣೆಗೆ ನಿಲ್ಲಲಿದೆ ಎಂದರು.

ಕೆಲವೆಡೆ ಮತೀಯ ಗಲಭೆ ಸಂಭವಿಸಿದಾಗ ಆಯೋಗವೇ ಖುದ್ದು ತೆರಳಿ, ಸಾರ್ವಜನಿಕರು ಹಾಗೂ ಆಡಳಿತ ವರ್ಗದಿಂದ ಮಾಹಿತಿ ಪಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ಜೈಲಿನಲ್ಲಿಯೂ ಅಲ್ಪಸಂಖ್ಯಾತರ ವರ್ಗಕ್ಕೆ ನ್ಯಾಯ ದೊರಕಿಸಲು, ಸರ್ಕಾರಕ್ಕೆ ಕೆಲ ಶಿಫಾರಸು ಮಾಡುವ ಕಾರ್ಯ ಕೂಡ ಆಯೋಗ ಮಾಡುತ್ತಿದೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಕಾಲನಿಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಚರಂಡಿ, ಆರೋಗ್ಯ ಸೇರಿ ಮೂಲಸೌಕರ್ಯಗಳ ಕುರಿತು ಪರಿಶೀಲಿಸುತ್ತಿದೆ. ಲೋಪ-ದೋಷ ಕಂಡು ಬಂದಲ್ಲಿ ಸರಿಪಡಿಸುವ ಕೆಲಸಕ್ಕೂ ಮುಂದಾಗಿದೆ ಎಂದು ವಿವರಿಸಿದರು.

ಚರ್ಚ್, ಮಸೀದಿ, ಗುರುದ್ವಾರಗಳಿಗೆ ತೆರಳಿ ಅಲ್ಲಿನ ಮುಖಂಡರೊಂದಿಗೆ ಚರ್ಚಿಸಿ, ಸಮುದಾಯದ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡುತ್ತಿದೆ. ಸರ್ಕಾರಿ ಯೋಜನೆ ದೊರಕದಿದ್ದರೆ, ಆಡಳಿತ ವರ್ಗದಿಂದ ಅನ್ಯಾಯವಾದರೆ, ಯಾವುದೇ ದೌರ್ಜನ್ಯಕ್ಕೆ ಒಳಗಾದಲ್ಲಿ ನ್ಯಾಯಕ್ಕಾಗಿ ಆಯೋಗಕ್ಕೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದರು.

ವಿದ್ಯಾರ್ಥಿ ವೇತನ ನೀಡಲು ತೊಂದರೆಯಾದ ಕಾರಣ ಆಯೋಗ ಕೇಂದ್ರ ಸಚಿವರನ್ನು ಭೇಟಿಯಾಗಿ 48 ಕೋಟಿ ರೂ. ಅನುದಾನ ಬಿಡುಗಡೆಗೆ ಶ್ರಮಿಸಿದೆ. ಜಿಲ್ಲೆಗಳಲ್ಲಿ ವಕ್ಫೃ್ ಆಸ್ತಿಗಳ ರಕ್ಷಣೆ ಆಗಬೇಕು. ಒತ್ತುವರಿ ತೆರವುಗೊಳಿಸುವ ಕಾರ್ಯವಾಗಬೇಕು ಎಂದು ಸೂಚಿಸಿದರು.

ಮಹಮದ್ ಫಯಾಜ್ ಮಾತನಾಡಿ, ಐಎಎಸ್, ಐಪಿಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅಲ್ಪಸಂಖ್ಯಾತರ ಸಮುದಾಯದವರು ಬೆಂಗಳೂರು, ದೆಹಲಿ ಇತರೆಡೆ ಹೋಗಬೇಕಿದೆ. ಇಲ್ಲಿಯೇ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾನ್ವಿತ 35 ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ವಸತಿಸಹಿತ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಚರ್ಚ್ ನವೀಕರಣದ ಬಾಕಿ ಅನುದಾನ ಬಿಡುಗಡೆ, ಸಾಲ ಸೌಲಭ್ಯ, ಹೊಸದುರ್ಗದಲ್ಲಿ ಹೊಸ ಸ್ಮಶಾನಗಳ ಮಂಜೂರಾತಿ, ಮೌಲಾನಾ ಆಜಾದ್ ಶಾಲೆ ಆರಂಭ, ವಿದ್ಯಾರ್ಥಿ ವೇತನ ಬಿಡುಗಡೆ, ವಕೀಲರಿಗೆ ಶಿಷ್ಯ ವೇತನ, ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ, ಕ್ರಿಶ್ಚಿಯನ್ ಪವಿತ್ರ ಸ್ಥಳಕ್ಕೆ ಯಾತ್ರೆ ಕೈಗೊಳ್ಳಲು ಸಹಾಯಧನ ಸೇರಿ ಇತರೆ ಬೇಡಿಕೆಗಳನ್ನು ಸಾರ್ವಜನಿಕರು ಆಯೋಗದ ಮುಂದಿಟ್ಟರು.

ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್, ಉಪನಿರ್ದೇಶಕ ರಘುನಾಥ್, ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ, ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜ್, ಮುಖಂಡರಾದ ಎಂ.ಕೆ.ತಾಜ್‌ಪೀರ್, ಕ್ಲಾರೆನ್ಸ್ ಡಯಾಸ್, ಅಬ್ದುಲ್ ಬಷೀರ್, ಅಬ್ದುಲ್ ರೆಹಮಾನ್ ಇತರರಿದ್ದರು.