ಜಿಲ್ಲೆ

ಸರ್ಕಾರಿ ಭೂಮಿಯನ್ನಷ್ಟೇ ವಶಕ್ಕೆ ಪಡೆಯಿರಿ, ಪ್ರಧಾನ ಜಿಲ್ಲಾ ನ್ಯಾ.ಟಿ.ಎನ್.ಇನವಳ್ಳಿ ಸೂಚನೆ, ವಿಜಯಪುರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪರಿಶೀಲನೆ

ದೇವನಹಳ್ಳಿ: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಗುರುತಿಸಿರುವ ಜಾಗವನ್ನು ಸಮರ್ಪಕವಾಗಿ ಸರ್ವೇ ನಡೆಸಿ ಸರ್ಕಾರಿ ಭೂಮಿಯನ್ನಷ್ಟೇ ವಶಕ್ಕೆ ಪಡೆಯಿರಿ, ಸಮರ್ಪಕ ದಾಖಲೆಗಳಿದ್ದರೆ ರೈತರ ಭೂಮಿಯನ್ನು ಬಿಟ್ಟುಕೊಡಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಿ ಎಂದು ಪ್ರಧಾನ ಜಿಲ್ಲಾ ನ್ಯಾ.ಟಿ.ಎನ್.ಇನವಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಆಸ್ಪತ್ರೆ ಮುಂಭಾಗ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಈ ವೇಳೆ ಕೆಲ ರೈತರು ನ್ಯಾಯಾಲಯ ನಿರ್ಮಾಣದ ನೆಪದಲ್ಲಿ ನಮ್ಮ ಜಮೀನನ್ನು ವಶಕ್ಕೆ ಪಡೆಯಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಬಂದಿದ್ದೇವೆ, ಇದರಿಂದ ರೈತರ ಜಮೀನಿಗೂ ಭದ್ರತೆ ದೊರೆಯುತ್ತದೆ ಸರ್ಕಾರದ ಭೂಮಿಯೂ ಉಳಿಯಲಿದೆ ಎಂದು ಹೇಳಿದರು.

ರೈತರು ತಮ್ಮಲ್ಲಿನ ದಾಖಲೆ ತಂದು ಕಂದಾಯ ಇಲಾಖೆಯಲ್ಲಿ ಪರಿಶೀಲಿಸಿಕೊಳ್ಳಬೇಕು, ಇದಕ್ಕಾಗಿಯೇ ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ವಿವಾದಿತ ಜಮೀನು ಪರಿಶೀಲನೆ: ಹಲವು ವರ್ಷದಿಂದ ರೈತರು ಹಾಗೂ ಸರ್ಕಾರದ ಈ ಸ್ಥಳದ ಬಗ್ಗೆ ಹಗ್ಗಾಜಗ್ಗಾಟ ನಡೆಯುತ್ತಿದ್ದು, ಸ್ಥಳದ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿವಾದಿತ ಜಮೀನಿನ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಸೇರಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನ್ಯಾಯಾಧೀಶರು ಸ್ಥಳ ಪರಿಶೀಲನೆ ಆಗಮಿಸಿದ್ದರು.