ಜಿಲ್ಲೆ

ಸರ್ಕಾರಿ ಭೂಮಿ ಭೂಗಳ್ಳರ ಪಾಲು

ಶ್ರೀರಂಗಪಟ್ಟಣ: ಕ್ಷೇತ್ರದಲ್ಲಿನ ಸರ್ಕಾರಿ ಭೂಮಿಗಳು ಭೂ ಮಾಫಿಯಾದ ಭೂಗಳ್ಳರ ಪಾಲಾಗುತ್ತಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳದೆ ಮೌನವಹಿಸಲು ಕಾರಣವೇನು ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಕಚೇರಿಗೆ ಸೋಮವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿದ ಅವರು ಸಭಾಂಗಣದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರೊಂದಿಗೆ ಚರ್ಚಿಸಿ ಆಕ್ರೋಶ ಹೊರಹಾಕಿದರು.

ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮೈಸೂರು ಮಹಾನಗರ ಸಮೀಪದ ಬೆಳವಾಡಿ ಗ್ರಾಮದ ಸರ್ವೇ ನಂ.64ರಲ್ಲಿ 70 ಎಕರೆ ಸರ್ಕಾರಿ ಭೂಮಿಯನ್ನು ಭೂ ಮಾಫಿಯಾದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ನುಂಗಿಹಾಕಿ ಖಾಸಗಿ ಲೇಔಟ್ ನಿರ್ಮಿಸುವ ಜತೆಗೆ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದಾರೆ. ಈ ವಿಚಾರದ ಬಗ್ಗೆ ಕಳೆದ 1 ತಿಂಗಳ ಹಿಂದೆ ತಾಲೂಕು ಆಡಳಿತದ ಗಮನಕ್ಕೆ ತಂದು ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದ ವೇಳೆ ಈ ಸಮಸ್ಯೆ ಕುರಿತು ಸಮಸ್ಯೆ ಆಲಿಸಿದ್ದ ಖುದ್ದು ಜಿಲ್ಲಾಧಿಕಾರಿಗಳೇ ಆ ಸ್ಥಳವನ್ನು ವಶಕ್ಕೆ ಪಡೆಯಲು ತಮಗೆ ಸೂಚನೆ ನೀಡಿದ್ದರು. ಇಷ್ಟಾದರೂ ಈವರೆಗೆ ಯಾವುದೇ ಕಂದಾಯ ಅಧಿಕಾರಿಯಾಗಲೀ, ಸರ್ವೇ ಅಧಿಕಾರಿಯಾಗಲೀ ಸ್ಥಳಕ್ಕೆ ತೆರಳಿ ಅಳತೆ ಇರಲಿ ಪರಿಶೀಲನೆಯನ್ನೂ ನಡೆಸಿಲ್ಲ. ಕಣ್ಣೆದುರೆ ಕೋಟ್ಯಂತರ ರೂ.ಮೌಲ್ಯದ ಆಸ್ತಿ ನುಂಗುತ್ತಿದ್ದರೂ ಮೌನ ವಹಿಸಲು ನೀವೂ ಅವರೊಂದಿಗೆ ಶಾಮೀಲಾಗಿರುವುದೇ ಕಾರಣ. ಇದು ಕೇವಲ ಇಲ್ಲಿ ಮಾತ್ರವಲ್ಲ, ಮೈಸೂರು ನಗರಕ್ಕೆ ಮತ್ತೊಂದು ಗಡಿಯಲ್ಲಿನ ಗ್ಯಾಮನ್ ಕಾರ್ಖಾನೆ ವ್ಯಾಪ್ತಿಯಲ್ಲಿ ಬಿ ಖರಾಬು ಪ್ರದೇಶ ಹಾಗೂ ಜುವಾರಿ ಗಾರ್ಡ್‌ನ್ ಖಾಸಗಿ ಲೇಔಟ್ ಸೇರಿದಂತೆ ಬೆಳಗೊಳ ಹೋಬಳಿಯ ಬಸ್ತೀಪುರ, ಬೆಳಗೊಳ ಹಾಗೂ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇಂತಹ ಅಕ್ರಮ ನಡೆಯುತ್ತಿವೆ ಎಂದರು.

ಇಲ್ಲಿ ತಾಲೂಕು ಆಡಳಿತದ ಅಧಿಕಾರಿಗಳೂ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಇನ್ನು 1 ವಾರಗಳಲ್ಲಿ ಈ ಬಗ್ಗೆ ಸರಿಯಾದ ಪರಿಶೀಲನೆ ಮೂಲಕ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ಕಚೇರಿಯಲ್ಲಿ ರೈತರು ಠಿಕಾಣಿ ಹೂಡುವ ಜತೆಗೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮನವಿ ಆಲಿಸಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಆಡಳಿತದಲ್ಲಿ ಅಧಿಕ ಕೆಲಸಗಳ ಒತ್ತೆ ಹಾಗೂ ಕೇವಲ ಒಬ್ಬ ಸರ್ವೇಯರ್ ಇರುವ ಕಾರಣ ಪರಿಶೀಲನೆ ತಡವಾಗಿದ್ದು, ಕೆಲವೇ ದಿನಗಳಲ್ಲಿ ಸರ್ಕಾರದ ಅಧಿಕೃತ ಆಸ್ತಿ ಪತ್ರಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ತುರ್ತು ಕ್ರಮ ವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಸಮಾಧಾನಗೊಂಡರು.

ಉಪಾಧ್ಯಕ್ಷರಾದ ಜಯರಾಮೇಗೌಡ, ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಪುಟ್ಟಮಾದು, ಸಲಹೆಗಾರರಾದ ಕಡತನಾಳು ಶ್ರೀಧರ್, ರವಿ ಲಕ್ಷ್ಮಣ, ಸಂಘಟನಾ ಕಾರ್ಯದರ್ಶಿ ಮಹಾಲಿಂಗು, ಪಾಲಹಳ್ಳಿ ರಾಮಚಂದ್ರು, ಸಂಚಾಲಕರು ಡಿ.ಮಂಜುನಾಥ್, ಚಾಮರಾಜು, ಕಪರನಕೊಪ್ಪಲು ಸುರೇಶ್, ಮೇಳಾಪುರ ದೇವರಾಜು, ಚಿಂದಗಿರಿಕೊಪ್ಪಲು ರಾಮಚಂದ್ರು, ಅಚ್ಚಪ್ಪನಕೊಪ್ಪಲು ಕೃಷ್ಣ ಮತ್ತಿತರರು ಹಾಜರಿದ್ದರು.