ವಿರಾಜಪೇಟೆ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ನ್ಯಾಯಾಲಯ ಸಾರಿಗೆ ಬಸ್ ವಶಕ್ಕೆ ಪಡೆದಿದೆ.
ವಿರಾಜಪೇಟೆಯ ನಿವಾಸಿ ಮುನಾವರ್ ಮುನ್ನಾ ಎಂಬುವರು 2010ರಲ್ಲಿ ಹುಣಸೂರು ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಸಾರಿಗೆ ಬಸ್ ಹಾಗೂ ತಮ್ಮ ಸ್ಯಾಂಟ್ರೋ ಕಾರು ನಡುವೆ ಡಿಕ್ಕಿ ಸಂಭವಿಸಿ ಮುನಾವರ್ ಮುನ್ನಾ ಮೃತಪಟ್ಟಿದ್ದರು.
ಮುನಾವರ್ ಮನ್ನಾ ಅವರ ಪತ್ನಿ ಫಾತೀಮಾ ಕೆಎಸ್‌ಆರ್‌ಟಿಸಿ ವಿರುದ್ಧ ಅಪಘಾತ ವಿಮೆ ಪರಿಹಾರಕೋರಿ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 2020ರಲ್ಲಿ ಜಿಲ್ಲಾ ನ್ಯಾಯಾಲಯದಿಂದ ಪರಿಹಾರ ನೀಡಲು ಆದೇಶಿಸಿತ್ತು. ಈ ತೀರ್ಪಿನ ವಿರುದ್ಧ ರಾಜ್ಯ ಉಚ್ಚ ನ್ಯಾಯಲಯಕ್ಕೆ ಕೆಎಸ್‌ಆರ್‌ಟಿಸಿ ಮೇಲ್ಮನವಿ ಸಲ್ಲಿಸಿತು.
ಆದರೆ, ಉಚ್ಛ ನ್ಯಾಯಲಯದಲ್ಲಿ ಜಿಲ್ಲಾ ನ್ಯಾಯಲಯದ ತೀರ್ಪನ್ನು ಎತ್ತಿ ಹಿಡಿಯಿತು. ಸಾರಿಗೆ ಸಂಸ್ಥೆಯಿಂದ ಮುನಾವರ್ ಅವರು ಪ್ರಾಣ ಕಳೆದುಕೊಂಡಿದಕ್ಕೆ ಪರಿಹಾರವನ್ನೂ ಪಾವತಿ ಮಾಡಲಾಯಿತು. ಆದರೆ, ಕಾರು ಜಖಂಗೊಂಡಿದ್ದಕ್ಕೆ 1.48 ಲಕ್ಷ ರೂ. ವಿಮೆ ಹಣ ನೀಡಿರಲಿಲ್ಲ. ಜಿಲ್ಲಾ ನ್ಯಾಯಲಯದಲ್ಲಿ ವಾಹನವನ್ನು ಜಪ್ತಿ ಮಾಡುವ ಆದೇಶ ಪಡೆದು ಆ ಮೂಲಕ ಆಗಸ್ಟ್ 31 ರಂದು ಬಸ್ ವಶಕ್ಕೆ ಪಡೆಯಲಾಗಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಬಸ್ ಮಾರ್ಗವನ್ನು ಸಂಸ್ಥೆ ಬದಲಾಯಿಸಿತ್ತು ಎನ್ನಲಾಗಿದೆ. ಆ.31ರಂದು ವಿರಾಜಪೇಟೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಸ್ ಅನ್ನು ನ್ಯಾಯಾಲಯದ ಸಿಬ್ಬಂದಿ ಸ್ಟೀಫನ್ ಮತ್ತು ತಂಡ ವಶಕ್ಕೆ ಪಡೆದು ನ್ಯಾಯಾಲಯದ ಸುಪರ್ಧಿಗೆ ಒಪ್ಪಿಸಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲ ಟಿ.ಪಿ. ಕೃಷ್ಣ ವಾದಿಸಿದ್ದರು.