ಜಿಲ್ಲೆ

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್ ಬುಕ್ ಮತ್ತು ಬ್ಯಾಗ್ ವಿತರಣೆ

ಹಾಸನ: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಹಂಜಳಿಗೆ ಕಾಳಿಂಗಪ್ಪ ವೆಲ್‌ಪೇರ್ ಅಸೋಷಿಯೇಷನ್ ವತಿಯಿಂದ ಆಲೂರು ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಬ್ಯಾಗ್ ವಿತರಿಸಲಾಗುವುದು ಎಂದು ಅಸೋಸಿಯೇಷನ್‌ನ ಸಂಸ್ಥಾಪಕ ಎಚ್.ಕೆ.ಮಂಜುನಾಥ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಗಮನಿಸಿದರೆ ತೀವ್ರ ನೋವು ಉಂಟಾಗುತ್ತದೆ. ಆ ಹಿನ್ನೆಲೆಯಲ್ಲಿ ನಾವೆಲ್ಲ ಸ್ನೇಹಿತರು ಸೇರಿ ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನ ಉಳಿಸಿ, ಬೆಳೆಸುವ ದೃಷ್ಟಿಯಿಂದ ಈ ಬಾರಿ ನಮ್ಮ ಅಸೋಸಿಯೇಷನ್ ವತಿಯಿಂದ 4000 ವಿದ್ಯಾರ್ಥಿಗಳಿಗೆ 30,000 ನೋಟ್ ಬುಕ್,1100 ಬ್ಯಾಗ್‌ಗಳನ್ನು ಆಲೂರು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಯ 161 ಶಾಲೆಗಳಿಗೆ ವಿತರಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಮೂಲತ ಆಲೂರು ತಾಲೂಕಿನ ಹಂಜಳಿಗೆ ಗ್ರಾಮದವನಾಗಿದ್ದು, ವಿದ್ಯಾಭ್ಯಾಸದ ನಂತರ ತುಮಕೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ನಾವೆಲ್ಲ ಸ್ನೇಹಿತರ ಬಳಗದವರು ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ವರ್ಷದಲ್ಲಿ ಹಾಸನ, ಮೈಸೂರು, ಚಾಮರಾಜನಗರ, ತುಮಕೂರು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಇನ್ನಿತರ ಕಡೆ ಈ ರೀತಿ ನೋಟ್ ಬುಕ್ ಗಳನ್ನು ವಿತರಣೆ ಮಾಡಲು ತಯಾರು ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಅಲ್ಲದೆ ಆಲೂರು ತಾಲೂಕಿನ 4 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುವುದು. ಇದರಿಂದಲಾದರೂ ಸರ್ಕಾರಿ ಶಾಲೆಗೆ ಮಕ್ಕಳು ದಾಖಲಾತಿ ಹೆಚ್ಚಾಗುವುದರ ಜೊತೆಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಲ್ಲಿ ನಮ್ಮ ಒಂದು ಚಿಕ್ಕ ಅಳಿಲುಸೇವೆಯನ್ನ ಮಾಡುತ್ತಿದ್ದೇವೆ ಎಂದರು.
ಹಂಜಳಿಗೆ ಕಾಳಿಂಗಪ್ಪ ವೆಲ್‌ಪೇರ್ ಅಸೋಷಿಯೇಷನ್ 2012ರಲ್ಲಿ ಪ್ರಾರಂಭಿಸಲಾಯಿತು. ಆ ಸಂದರ್ಭದಲ್ಲಿ 18 ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನ ಉಚಿತವಾಗಿ ನೀಡಿದವು. ಈಗ ಸುಮಾರು 4000 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಆಲೂರು ತಾಲೂಕಿನ ಎಲ್ಲ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬುದರ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಹೆರಗು ರಮೇಶ್, ಸತೀಶ್, ಗುರುನಾಥ್ ಹಾಜರಿದ್ದರು.