ಹಾಸನ: ದೇಶ ಕಟ್ಟುವುದರಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಬದ್ಧತೆ, ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜತೆಗೆ ನೌಕರರು ಶಿಸ್ತನ್ನು ಮೈಗೂಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸರ್ಕಾರಿ ನೌಕರರು ಇದ್ದಾಗ ಮಾತ್ರ ಆಡಳಿತ ಸುಗಮವಾಗಿರುತ್ತದೆ ಹಾಗೆಯೇ ಜನರ ಸಮಸ್ಯೆಗಳನ್ನು ಕೂಡ ಶೀಘ್ರವಾಗಿ ಬಗೆಹರಿಸಬಹುದು. ಹಾಗಾಗಿ ಎಲ್ಲ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿ ಎಂದು ಹೇಳಿದರು.
ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ಜವಾಬ್ದಾರಿ ಅರಿತು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ. ಆದ್ಯತೆಯ ಮೇರೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಎಂದರಲ್ಲದೆ ನಾವು ಹೇಳಿದಂತೆ ಮಾಡಿ ತೋರಿಸಬೇಕು. ಈ ನಿಟ್ಟಿನಲ್ಲಿ ಮಾತನ್ನು ಕೃತಿ ರೂಪಕ್ಕೆ ತರಬೇಕು. ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಪ್ರತಿಯೊಂದು ಕೆಲಸ ಕಾರ್ಯಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ವೃತ್ತಿ ಜೀವನದಲ್ಲಿ ಯಾರು ಬೆರಳು ತೋರಿಸದಂತೆ ನಡೆಯಬೇಕು ಎಂದರು.
ಇ-ಆಫೀಸ್ ಬಳಸುವುದರಿಂದ ಪಾರದರ್ಶಕತೆ ಕಾಪಾಡಬಹುದು. ಪೇಪರ್ ಉಳಿತಾಯ ಮಾಡುವುದರೊಂದಿಗೆ ಪರಿಸರ ಸಂರಕ್ಷಣೆಯನ್ನು ಕೂಡ ಮಾಡಬಹುದು ಎಂದು ಇ-ಆಡಳಿತದ ಕುರಿತಾದ ಅನುಕೂಲಗಳ ಬಗೆಗೆ ವಿವರಿಸಿದರು.
ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ತಮ್ಮ ನಡತೆಯನ್ನು ಉತ್ತಮಪಡಿಸಿಕೊಳ್ಳಿ. ನೌಕರರು ಕ್ರಿಯಾಶೀಲರಾಗಿ ಕೆಲಸ ಮಾಡಲು ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಜಿಲ್ಲಾ ನೌಕರರ ಸಂಘವು ಆಯೋಜಿಸಬೇಕು. ಜತೆಗೆ ಎಲ್ಲ ನೌಕರರು ತಮ್ಮ ಬಿಡುವಿನ ಸಂದರ್ಭಗಳಲ್ಲಿ ತಮಗಿಷ್ಟವಾದ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಜ್ಞಾನವೃದ್ಧಿ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಇಂದು ರಾಷ್ಟ್ರ, ರಾಜ್ಯದಲ್ಲಿ ಕಾಯಾರ್ಂಗ ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಎಂದರೆ ಅದಕ್ಕೆ ಸರ್ಕಾರಿ ನೌಕರರ ಸಹಕಾರ ಮತ್ತು ಕೊಡುಗೆ ಇದೆ. ಇ-ಆಡಳಿತ, ಸರ್ವೇ ಹೀಗೆ ಎಲ್ಲ ವಿಚಾರಗಳಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಹೊಸ ಹೊಸ ಬದಲಾವಣೆಗಳು ಆಡಳಿತದಲ್ಲಾಗುತ್ತಿವೆ. ಆ ಎಲ್ಲ ಬದಲಾವಣೆಗಳಿಗೂ ನೌಕರರು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರುವುದರಿಂದ ಉತ್ತಮ ಕೆಲಸಗಳು ಜಿಲ್ಲೆಯಲ್ಲಿ, ರಾಜ್ಯದಲ್ಲಿಯೂ ಆಗುತ್ತಿವೆ ಎಂದು ಹೇಳಿದರು.
ಗಣಕೀಕರಣ, ಇ-ಆಫೀಸ್‌ನಿಂದ ಹಂತ ಹಂತವಾಗಿ ಲೋಪ-ದೋಷಗಳು ಕಡಿಮೆಯಾಗುತ್ತಿವೆ. ಉತ್ತಮ ಸೇವೆ ಮಾಡಿರುವಂತಹ ನೌಕರರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ. ಹಾಗಾಗಿ 2023ರಲ್ಲಿ ಉತ್ತಮ ಸೇವೆ ಸಲ್ಲಿಸಿರುವಂತಹವರನ್ನು ಗುರುತಿಸಿ ಇಂದು ಸನ್ಮಾನಿಸುತ್ತಿದ್ದೇವೆ. ಇನ್ನೂ ಹೆಚ್ಚಿನ ನೌಕರರು ಈ ಗೌರವಕ್ಕೆ ಪಾತ್ರರಾಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ 2023ರಲ್ಲಿ ಉತ್ತಮ ಸೇವೆ ಸಲ್ಲಿಸಿರುವಂತಹ ನೀರಾವರಿ ಇಲಾಖೆಯ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಎಂ.ಕೃಷ್ಣಮೂರ್ತಿ, ಅರಸೀಕೆರೆ ತಾಲ್ಲೂಕಿನ ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ತುರ್ತು ವಾಹನ ಚಾಲಕರಾದ ಎಂ.ಆರ್. ಕೃಷ್ಣಮೂರ್ತಿ, ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪ ಗ್ರಾಮ ಪಂಚಾಯಿತಿಯ ಪಿಡಿಒ ಎಸ್.ಎ. ರಂಗಸ್ವಾಮಿ, ಜಿಲ್ಲಾ ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಎನ್. ಪ್ರದೀಪ್ ಕುಮಾರ್, ಬೇಲೂರು ತಾಲೂಕು ಕಂದಾಯ ಇಲಾಖೆಯ ಶಿರಸ್ತೇದಾರ್ ನಿಯೋಜನೆ ಮೇರೆಗೆ ಜಿಲ್ಲಾಧಿಕಾರಿ ಕಚೇರಿ ಕೋದಂಡರಾಮ ಶೆಟ್ಟಿ, ಹಿಮ್ಸ್ ಪ್ರಾಂಶುಪಾಲ ಡಾ. ಬಿ.ಸಿ.ರವಿಕುಮಾರ್, ಹಾಸನ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಂ. ವಿಜಯ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶ ಡಾ.ಎ.ಬಿ.ಸಂಜಯ್, ಹಾಸನ ಪೊಲೀಸ್ ಅಧೀಕ್ಷಕರ ಕಚೇರಿಯ ಶೀಘ್ರ ಲಿಪಿಗಾರರಾದ ಬಿ.ಎಸ್.ಲಕ್ಷ್ಮೀ, ಕೃಷಿ ಇಲಾಖೆಯ ಅರೇಹಳ್ಳಿ ಕೃಷಿ ಅಧಿಕಾರಿ ಯು.ಎಂ. ಪ್ರಕಾಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್‌ಪಿ ವೆಂಕಟೇಶ್ ನಾಯ್ಡು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ ಕೃಷ್ಣೇಗೌಡ, ಡಿಡಿಪಿಐ ಚಂದ್ರಶೇಖರ್, ಹಿಮ್ಸ್ ನಿರ್ದೇಶಕ ರಾಜಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್. ಅನಿಲ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಟಿ. ರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.