ಹಾಸನ: ನಗರದ ಜಿಲ್ಲಾ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರ್ಕಾರಿ ನೌಕರರ ಮಕ್ಕಳಿಗಾಗಿ ನಿರ್ಮಿಸಿರುವ ನೂತನ ಶಿಶು ಪಾಲನಾ ಕೇಂದ್ರವನ್ನು ಶುಕ್ರವಾರ ಶಾಸಕ ಪ್ರೀತಂ ಜೆ. ಗೌಡ ಮತ್ತು ಜಿಪಂ ಸಿಇಒ ಕಾಂತರಾಜು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರೀತಮ್ ಗೌಡ ಅವರು, ಉದ್ಯೋಗದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ತಮ್ಮ ಚಿಕ್ಕ ಮಕ್ಕಳ ಪಾಲನೆ ದೊಡ್ಡ ಜವಾಬ್ದಾರಿಯಾಗಿರುತ್ತದೆ. ತಾವು ಕೆಲಸ ಮಾಡುವ ಸಮೀಪದಲ್ಲಿ ಶಿಶು ಪಾಲನಾ ಕೇಂದ್ರಗಳಿದ್ದರೆ ನೆಮ್ಮದಿಯಾಗಿ ಮಕ್ಕಳನ್ನು ಅಲ್ಲಿ ಬಿಟ್ಟು ಕೆಲಸ ಮಾಡಬಹುದಾಗಿದೆ. ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಪಂ ಸಿಇಒ ಕಾಂತರಾಜು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರ್ಕಾರಿ ನೌಕರರ ಮಕ್ಕಳಿಗಾಗಿ ನಗರದಲ್ಲಿ ಎರಡು ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಮತ್ತೊಂದು ಶಿಶುಪಾಲನಾ ಕೇಂದ್ರವು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕೇಂದ್ರದಲ್ಲಿದ್ದು, 42 ಮಕ್ಕಳು ಆಶ್ರಯ ಪಡೆದಿದ್ದಾರೆ. ಇಬ್ಬರು ಸಹಾಯಕಿಯರು ಹಾಗೂ ಒಬ್ಬ ಶಿಕ್ಷಕಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಜಿಲ್ಲಾ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ 14 ಮಕ್ಕಳು ಆಶ್ರಯ ಪಡೆದಿದ್ದು, ಒಬ್ಬ ಸಹಾಯಕಿ ಮತ್ತು ಒಬ್ಬರು ಶಿಕ್ಷಕಿಯನ್ನು ನೇಮಿಸಲಾಗಿದೆ ಎಂದು ವಿವರ ನೀಡಿದರು.
ಆರು ತಿಂಗಳಿಂದ ಆರು ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರಕ್ಕೆ ಸೇರಿಸಬಹುದಾಗಿದೆ. ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಹಾಗೂ ಸುರಕ್ಷತೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಶಿಶು ಪಾಲನಾ ಕೇಂದ್ರವು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಉಪ ಕಾರ್ಯದರ್ಶಿ ಪುನೀತ್, ಸಹಾಯಕ ಕಾರ್ಯದರ್ಶಿ ಹರೀಶ್, ಮಹಿಳಾ ಮತ್ತು ಮಕ್ಕಳ ಇಲಾಖೆ ನಿರೂಪಣಾಧಿಕಾರಿ ದಿಲೀಪ್ ಮತ್ತಿತರರು ಹಾಜರಿದ್ದರು.