ಜಿಲ್ಲೆ

ಸರ್ಕಾರಿ ನೌಕರರ ಭವನಕ್ಕೆ ಹೊಸ ಕಳೆ

ಬೀದರ್: 20 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಇಲ್ಲಿನ ಪ್ರತಾಪನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ ಉದ್ಘಾಟನೆಗೆ ಸಜ್ಜುಗೊಂಡಿದೆ. ವಿವಿಧ ಸೌಕರ್ಯ ಕಲ್ಪಿಸಿದ ಕಾರಣ ಇದೀಗ ಭವನಕ್ಕೆ ಹೊಸ ಕಳೆ ಬಂದಿದೆ. ಮುಖ್ಯ ಸಭಾಂಗಣದ ಫಾಲ್ ಸೀಲಿಂಗ್, ಧ್ವನಿ- ಬೆಳಕು, ಅಲ್ಯುಮಿನಿಯಂ ಕಿಟಕಿಗಳು, ಪೀಠೋಪಕರಣಗಳು ಭವನದ ಅಂದ ಹೆಚ್ಚಿಸಿವೆ.

ಮಂಗಳವಾರ ಸಂಜೆ 5ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ನವೀಕೃತ ಭವನವನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಉದ್ಘಾಟಿಸಿ, ನೌಕರರು ಹಾಗೂ ಶಿಕ್ಷಕರೊಂದಿಗೆ ನೇರ ಸಂವಾದ ನಡೆಸುವರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಡಿಸಿ ರಾಮಚಂದ್ರನ್, ಅಪರ ಡಿಸಿ ರುದ್ರೇಶ ಘಾಳಿ ಇತರರು ಪಾಲ್ಗೊಳ್ಳುವರು. ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸುವರು. ಈ ವೇಳೆ ಕರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಗುವುದು.

ಎರಡನೇ ಅವಧಿಗೆ ಅವಕಾಶ ಸಿಕ್ಕ ನಂತರ ನೌಕರರ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಭವನ ಮಾದರಿಯಾಗಿ ಮಾಡುವ ಗುರಿಯಿದೆ. ನಗರದಲ್ಲಿ ಬಹುಮಹಡಿ ಕಟ್ಟಡ ಮಾದರಿಯಲ್ಲಿ ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣ, ಕೆಜಿಐಡಿ ಕಂಪ್ಯೂಟರೀಕರಣ, ಜಿಲ್ಲಾ ಗುರುಭವನ ಶಿಕ್ಷಕರ ಸಂಘಕ್ಕೆ ಹಸ್ತಾಂತರ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಗಂದಗೆ ತಿಳಿಸಿದ್ದಾರೆ.

ಭವನದಲ್ಲಿ ಇನ್ನೂ ಹಲವು ಕೆಲಸಕ್ಕಾಗಿ ರಾಜ್ಯ ಸರ್ಕಾರಕ್ಕೆ ರೂ. 3 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಸಜ್ಜಿತ ಅಡುಗೆ ಕೋಣೆ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಬಯಲು ರಂಗಮಂದಿರ, ನೌಕರರ ವಸತಿಗೃಹ ಯೋಜನೆ ಒಳಗೊಂಡಿದೆ.| ರಾಜೇಂದ್ರಕುಮಾರ ಗಂದಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ