ಜಿಲ್ಲೆ

ಸರ್ಕಾರಿ ನೌಕರರ ಕ್ರೀಡೆಗೆ ಸಿದ್ಧತೆ ಪೂರ್ಣ

Bidar

ಬೀದರ್: ನಗರದಲ್ಲಿ ಫೆ.12 ಮತ್ತು 13 ರಂದು ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಒಳಾಂಗಣ ಕ್ರೀಡಾಂಗಣ, ಗುಂಪು ಸ್ಪರ್ಧೆಗಳು ನೆಹರು ಕ್ರೀಡಾಂಗಣ ಹಾಗೂ ಸಂಗೀತ ಸಂಜೆಯ ಕಾರ್ಯಕ್ರಮ ಡಾ. ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆಯಲಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.

ಚೆಸ್, ಬ್ಯಾಡ್ಮಿಂಟನ್, ಟೆಬಲ್ ಟೆನಿಸ್, ಕೇರಂ, ನಾಟಕ, ಏಕಪಾತ್ರಾಭಿನಯ, ಜಾನಪದ ನೃತ್ಯ, ಭರತನಾಟ್ಯ ಮೊದಲಾದ ಸ್ಪರ್ಧೆಗಳು ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿವೆ. ಕ್ರಿಕೆಟ್, ಹಾಕಿ, ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಕುಸ್ತಿ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, 100 ಮೀ. ಓಟ,, 200 ಮೀ. ಓಟ, 400 ಮೀ. ಓಟ, 800 ಮೀ. ರಿಲೇ ನೆಹರು ಕ್ರೀಡಾಂಗಣದಲ್ಲಿ ನಡೆಯಲಿವೆ. 12ರಂದು ಬೆಳಗ್ಗೆ 11ಕ್ಕೆ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಚಾಲನೆ ನೀಡಲಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಅಂದು ಸಂಜೆ 5ಕ್ಕೆ ರಂಗಮಂದಿರದಲ್ಲಿ ಬಿದರಿ ಸಾಂಸ್ಕೃತಿಕ ವೇದಿಕೆಯ ಗಾಯಕಿ ರೇಖಾ ಅಪ್ಪಾರಾವ್ ಸೌದಿ ಹಾಗೂ ಬೆಂಗಳೂರಿನ ಗೋವಿಂದ ಕರ್ನೂಲ್ ತಂಡದವರು ಸಂಗೀತ ಸಂಜೆ ನೀಡಲಿದೆ. 13ರಂದು ಸಂಜೆ 4ಕ್ಕೆ ಸಮಾರೋಪ, ಬಹುಮಾನ ವಿತರಣೆ ಜರುಗಲಿದೆ. ಈ ಬಾರಿ ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಯಾ ದಿನವೇ ಬಹುಮಾನ ವಿತರಿಸಲಾಗುವುದು. ಗುಂಪು ಸ್ಪರ್ಧೆಗಳ ವಿಜೇತ ತಂಡಗಳಿಗೆ ಸಮಾರೋಪದಲ್ಲಿ ಬಹುಮಾನ ಕೊಡಲಾಗುವುದು. ನೌಕರರಿಗೆ ಎರಡು ದಿನಗಳ ಒಒಡಿ ಸೌಲಭ್ಯ ಇದೆ. ಅದರ ಪ್ರಯೋಜನ ಪಡೆದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಗಂದಗೆ ಕೋರಿದ್ದಾರೆ.

1500 ನೌಕರರು ನೋಂದಣಿ
ಕ್ರೀಡಾಕೂಟದಲ್ಲಿ ಭಾಗವಹಿಸಲು 1500 ನೌಕರರು ಆನ್ ಲೈನ್ ನಲ್ಲಿ ಹೆಸರು ನೋಂದಾಯಿಸಿದ್ದಾರೆ. ನೋಂದಣಿ ಮಾಡಿಸಿದವರು ಕಡ್ಡಾಯವಾಗಿ ಕೆಜಿಐಡಿ ಸಂಖ್ಯೆ, ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಣ ಪತ್ರ ತರಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನೌಕರರಿಗೆ ಸಂಘವು ಟೀ ಶಟ್೯ ಹಾಗೂ ಟೊಪ್ಪಿಗೆಗಳನ್ನು ವಿತರಿಸಲಿದೆ. ಸಂಘದ ಕ್ರೀಡಾಪಟುಗಳು ಹಾಗೂ ನಿರ್ಣಾಯಕರಿಗೆ ಪ್ರತ್ಯೇಕ ಬಣ್ಣಗಳ ಟೀ ಶಟ್೯ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಎರಡು ದಿನ ನೌಕರರಿಗೆ ಚಹಾ, ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಚಪಾತಿ, ಪಲ್ಯ, ಅನ್ನ, ಸಾಂಬಾರು ಜತೆಗೆ ಸಿಹಿ ತಿನಿಸು ಭೋಜನದ ವಿಶೇಷವಾಗಿವೆ.| ರಾಜೇಂದ್ರ ಗಂದಗೆಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ