ಜಿಲ್ಲೆ

ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಲಾಬಿ!

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಪ್ರತಿವರ್ಷ ಆಯೋಜಿಸುವ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಜೇತರ ಆಯ್ಕೆ ವಿಷಯದಲ್ಲಿ ಲಾಬಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ನಡೆದ ಕ್ರೀಡಾಕೂಟದಲ್ಲೂ ಅಕ್ರಮ ನಡೆದಿರುವ ಬಗ್ಗೆ ಖುದ್ದು ಸರ್ಕಾರಿ ನೌಕರರೇ ಕ್ರೀಡಾ ಸಚಿವರಿಗೆ ದೂರು ನೀಡಿರುವುದು ಕ್ರೀಡಾಕೂಟದ ಲಾಬಿಯನ್ನು ಪುಷ್ಟೀಕರಿಸಿದೆ.
ಪ್ರಸಕ್ತ ಸಾಲಿನಲ್ಲೂ ತಾಲೂಕು ಹಾಗೂ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಆದರೆ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದವರಿಗೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ತಾಲೂಕುಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಇದರಲ್ಲಿ ಬಹುಪಾಲು ನೌಕರರು ಪಾಲ್ಗೊಂಡಿಲ್ಲ ಎನ್ನಲಾಗಿದೆ. ತಾಲೂಕುಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಿಗಳು ಮಾತ್ರ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು, ಆದರೆ ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ ಭಾಗವಹಿಸದಿರುವ ನೌಕರರು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ ಎಂಬ ಅಂಶ ಸದ್ದು ಮಾಡುತ್ತಿದ್ದು, ಕೆಲವು ತಾಲೂಕಿನ ಸರ್ಕಾರಿ ನೌಕರರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರೇ ಹೊಣೆ: ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಯಲ್ಲಿ ವಿಜೇತರನ್ನು ಆಯ್ಕೆ ಮಾಡಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಲಿತಾಂಶದ ವರದಿ ಸಲ್ಲಿಸುವ ಹೊಣೆ ಹೊತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಶಿಕ್ಷಕರು ಆಯ್ಕೆ ವಿಷಯದಲ್ಲಿ ಲಾಬಿ ನಡೆಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದಿದ್ದರೂ ಬೇಕಾದವರನ್ನು ಆಯ್ಕೆ ಮಾಡಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸುತ್ತಿದ್ದಾರೆ ಎಂಬ ಆರೋಪ ದಟ್ಟವಾಗಿದೆ. ಅಷ್ಟೇ ಅಲ್ಲದೆ ದೈಹಿಕ ಶಿಕ್ಷಣ ಶಿಕ್ಷಕರು ಯಾವುದೇ ಕಾರಣಕ್ಕೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮವನ್ನು ಗಾಳಿಗೆ ತೂರಿ ಕೆಲವರು ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.
ಈಜು ಮತ್ತಿತರ ಕ್ರೀಡೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಪಾಲ್ಗೊಂಡು ವಿಜೇತರ ಹೆಸರಿನಲ್ಲಿ ತಮಗೆ ಬೇಕಾದವರ ಹೆಸರು ಸೇರಿಸುವ ಮೂಲಕ ಕ್ರೀಡಾಕೂಟದ ಆಶಯವನ್ನೇ ಮಣ್ಣುಪಾಲು ಮಾಡುತ್ತಿದ್ದಾರೆ ಎಂದ ದೂರು ಕೇಳಿಬರುತ್ತಿದೆ.


3 ದಿನ ರಜೆಯ ಮಜಾ: ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಯಾ ಇಲಾಖೆಯಿಂದ ಅಂಥ ನೌಕರರಿಗೆ 3 ದಿನ ರಜೆ ನೀಡಲಾಗುತ್ತದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಹೀಗೆ ಆಯ್ಕೆ ಲಾಬಿ ನಡೆಸುತ್ತಾರೆ. ಇಂಥವರು ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುವುದಿಲ್ಲ. ಅದರ ಬದಲಿಗೆ ರಜಾ ದಿನವನ್ನು ವೈಯಕ್ತಿಕ ಮೋಜಿಗೆ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಮಟ್ಟದ ಕ್ರೀಡಾ ಸ್ಪರ್ಧಿಗಳಿಗೆ ಕೊಡಲಾಗುವ ವಿಶೇಷ ಟ್ರ್ಯಾಕ್‌ಸ್ಯೂಟ್ ಪಡೆದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ, ಈ ಬಾರಿ ತುಮಕೂರಿನಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಯಾಗಲಿದೆ ಎನ್ನಲಾಗಿದ್ದು, ಅಷ್ಟರೊಳಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಡೆದಿರುವ ಅಕ್ರಮ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕ್ರೀಡಾ ಇಲಾಖೆ ಆಯುಕ್ತರಿಗೂ ತಲುಪಿದೆ.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಿಂದಿನಿಂದಲೂ ಇಂಥ ಲಾಬಿ ನಡೆದುಕೊಂಡೇ ಬಂದಿದೆ, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲವಷ್ಟೇ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದ ನೌಕರರಿಗೂ ರಾಜ್ಯಮಟ್ಟಕ್ಕೆ ಆಯ್ಕೆ ಎಂದು ೋಷಿಸಿ ಕಳುಹಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಇದು ಈ ಕಾರ್ಯಕ್ರಮದ ಆಶಯವನ್ನು ಮಣ್ಣು ಪಾಲು ಮಾಡುತ್ತಿದೆ.
ಹೆಸರು ಹೇಳಲಿಚ್ಛಿಸದ ಕ್ರೀಡಾ ಇಲಾಖೆ ಸಿಬ್ಬಂದಿ

ದೈಹಿಕ ಶಿಕ್ಷಕರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮ ಇದೆ. ಆದರೆ ಬಹುತೇಕ ಸ್ಪರ್ಧೆಗಳಲ್ಲಿ ಅವರೇ ಪಾಲ್ಗೊಳ್ಳುತ್ತಾರೆ, ಅಲ್ಲದೆ ತಮಗೆ ಬೇಕಾದವರ ಹೆಸರು ಸೇರಿಸಿ ಆಯ್ಕೆ ಮಾಡುತ್ತಾರೆ. ಸರ್ಕಾರಿ ನೌಕರರ ಕ್ರೀಡಾಕೂಟ ಎಂಬುದು ಕಾಟಾಚಾರ ಎಂಬಂತಾಗಿದೆ. ಈ ಬಗ್ಗೆ ಕ್ರೀಡಾ ಇಲಾಖೆ ಆಯುಕ್ತರು ಸೇರಿ ಸಚಿವರಿಗೆ ದೂರು ನೀಡಲಾಗಿದೆ.
ಹೆಸರು ಹೇಳಲಿಚ್ಛಿಸದ ಸರ್ಕಾರಿ ನೌಕರ ದೊಡ್ಡಬಳ್ಳಾಪುರ