*ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ವಾಗ್ದಾನ
*ರಾಜ್ಯಾಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ ಚುನಾವಣಾ ಪ್ರಚಾರ
ಚಾಮರಾಜನಗರ: ರಾಜ್ಯದ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಹಾಗೂ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಕಟಿಬದ್ಧವಾಗಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯಾಧ್ಯಕ್ಷ ಹಾಗೂ ಖಜಾಂಚಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಒಬ್ಬ ಸಾಮಾನ್ಯ ನೌಕರನಿಗೆ ದೊಡ್ಡ ಸ್ಥಾನವನ್ನು ನೀಡಿದಾಗ, ಆ ಸ್ಥಾನಕ್ಕೆ ಗೌರವವನ್ನು ಸಲ್ಲಿಸುವಂತೆ ಕೆಲಸ ಮಾಡಬೇಕಿದೆ. ಕಳೆದ ೫ ವರ್ಷಗಳ ಸಂಘಟನೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಾಗಿದೆ. ಸರ್ಕಾರಿ ನೌಕರರ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ಅವರಿಗೆ ನ್ಯಾಯವನ್ನು ಒದಗಿಸುವುದೇ ಸಂಘಟನೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಹಳ ಚಲನಶೀಲತೆಯಿಂದ ಸಂಘಟನೆಯನ್ನು ಕಟ್ಟಲಾಗುತ್ತಿದೆ ಎಂದು ಹೇಳಿದರು.
ಈ ಜಿಲ್ಲೆಯಲ್ಲಿ ಒಂದಷ್ಟು ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಅನೇಕ ಯುವಕರು ಸಂಘಟನೆಗೆ ಪದಾಧಿಕಾರಿಗಳಿಗೆ ಬಂದಿದ್ದಾರೆ. ಈ ಮೂಲಕ ನಮ್ಮನ್ನು ನಂಬಿರುವ ನೌಕರರಿಗೆ ಬಲವನ್ನು ತುಂಬಬೇಕಿದೆ. ಸ್ವಾರ್ಥಕ್ಕಾಗಿ ಸಂಘಟನೆಯನ್ನು ಬಳಸಿಕೊಳ್ಳದೇ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ೨೦೨೨ ರ ಬೈಲದಲ್ಲಿ ತಿದ್ದುಪಡಿ ಮಾಡಿ ಜಿಲ್ಲೆ ಮತ್ತು ತಾಲೂಕಿನ ಕಾರ್ಯದರ್ಶಿ ಮತ್ತು ಖಜಾಂಚಿಗಳಿಗೆ ರಾಜ್ಯಮಟ್ಟದಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ಇದಲ್ಲದೇ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿರುವ ನಾಗರಾಜು ಚುಮ್ಮಣ್ಣ ಮಾತನಾಡಿ, ಕಳೆದ ೫ ವರ್ಷದ ಅವಧಿಯನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಿದೆ. ಷಡಾಕ್ಷರಿ ಅವರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ನೌಕರರಿಗೆ ಶಿಶು ಪಾಲನಾ ರಜೆ ಮಂಜೂರು ಮಾಡಿಸಿದ್ದಾರೆ. ಅನಾಮಧೇಯ ದೂರುಗಳ ತನಿಖೆ ಆಗಬಾರದು ಹಾಗೂ ಇನ್ನಿತರೆ ೨೫ ಆದೇಶಗಳನ್ನು ಹೊರತಂದಿದ್ದಾರೆ. ಒಬ್ಬ ಸಮರ್ಥ ನಾಯಕ ರಾಜ್ಯದ ಚುಕ್ಕಾಣಿ ಹಿಡಿದಾಗ ಏನೆಲ್ಲಾ ಸಾಧನೆ ಮಾಡಬಹುದು ಅದನ್ನು ಷಡಕ್ಷರಿ ಅವರು ಮಾಡಿದ್ದಾರೆ ಎಂದರು.
ಸರ್ಕಾರಿ ನೌಕರರ ಅನೇಕ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆ. ೭ ನೇ ವೇತನ ಆಯೋಗ ಯಥಾವತ್ತು ಜಾರಿಗೊಳಿಸಲು ಕಾರಣಕರ್ತರಾಗಿದ್ದಾರೆ. ಶೇ.೨೭.೫ ವೇತನ ದೊರೆತಿದೆ. ೨೨ ಕೋಟಿ ರೂ ಹಣವನ್ನು ರಾಜ್ಯ ಸಂಘದಲ್ಲಿ ಉಳಿತಾಯ ಮಾಡುವ ಮೂಲಕ ಸಂಘದಲ್ಲಿ ಆರ್ಥಿಕ ಶಿಸ್ತನ್ನು ತಂದಿದ್ದಾರೆ. ಪ್ರತಿವರ್ಷ ೧೦ ಸಾವಿರ ಸರ್ಕಾರಿ ನೌಕರರ ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಡಾ.ರೇಣುಕಾದೇವಿ ಮಾತನಾಡಿ, ಷಡಾಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ೫ ವರ್ಷಗಳ ಕಾಲ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ಸರ್ಕಾರಿ ನೌಕರರು ತೀರ್ಮಾನ ಮಾಡಿದ್ದಾರೆ. ನಿಮ್ಮ ಯಶಸ್ಸಿನಲ್ಲಿ ಜಿಲ್ಲೆಯ ನೌಕರರು ಭಾಗಿಯಾಗುತ್ತೇವೆ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ಭೂಷಣ್, ಖಜಾಂಚಿ ಶಿವಕುಮಾರಯ್ಯ, ರಾಜ್ಯ ಪರಿಷತ್ ಸದಸ್ಯ ನಟರಾಜ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಸಾದ್, ಯಳಂದೂರು ತಾಲೂಕು ಅಧ್ಯಕ್ಷ ಮಹೇಶ್ ಅಮ್ಮನಪುರ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಅಲೆಗ್ಸಾಂಡರ್, ಹನೂರು ತಾಲೂಕು ಅಧ್ಯಕ್ಷ ಗುರುಸ್ವಾಮಿ, ಸಿದ್ದಬಸಪ್ಪ, ನಾಗನಗೌಡ, ಮಹದೇವಯ್ಯ ಸಿ.ಎಸ್.ನಾಗೇಂದ್ರ , ರಾಘವೇಂದ್ರ, ಮುತ್ತುಸ್ವಾಮಿ, ರವಿಕುಮಾರ್, ಜಗದೀಶ್, ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.