ಜಿಲ್ಲೆ

ಸರ್ಕಾರಿ ಜಾಗ ಉಳಿಸಲು ಏಕೆ ಅಸಡ್ಡೆ: ಅಧಿಕಾರಿಗಳ ಮೇಲೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಕೆಂಡಾಮಂಡಲ

ಮೈಸೂರು: ಸರ್ಕಾರಿ ಭೂಮಿ ಒಂದಲ್ಲ, ಎರಡು ಬಾರಿ ಒತ್ತುವರಿಯಾಗಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಹೀಗಾದರೆ ಸರ್ಕಾರಿ ಆಸ್ತಿ ಉಳಿಯಲು ಸಾಧ್ಯವೇ? ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಕೆಂಡಾಮಂಡಲವಾದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ   ದೂರುಗಳ ವಿಚಾರಣೆ ನಡೆಸಿದ ಅವರು, ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ ಸರ್ವೇ ನಂ.339ರಲ್ಲಿರುವ 7.28 ಎಕರೆ ಸರ್ಕಾರಿ ಜಮೀನು ಒತ್ತುವರಿ ಸಂಬಂಧಿಸಿದ ದೂರನ್ನು ಗಂಭೀರವಾಗಿ ಪರಿಗಣಿಸಿದರು. ಒಂದು ಸಲ ತೆರವುಗೊಳಿಸಿ ‘ಸರ್ಕಾರಿ ಜಾಗ’ ಎಂದು ನಾಮಫಲಕ ಹಾಕಿ ಬಂದ ಬಳಿಕ ಮತ್ತೆ ಅದನ್ನು ಅತಿಕ್ರಮಿಸಿಕೊಳ್ಳಲಾಗಿದೆ.

ಇದೆಲ್ಲ ಆಗುವವರೆಗೂ ಅಧಿಕಾರಿಗಳು ಏನು ಮಾಡುತ್ತಿದ್ದರು. ಎಫ್‌ಐಆರ್ ದಾಖಲು ಮಾಡಿ ಸುಮ್ಮನಾದರೆ ಕೆಲಸ ಮುಗಿಯುತ್ತದೆಯೇ? ಒತ್ತುವರಿದಾರರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

ಸರ್ಕಾರಿ ಜಾಗ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದು. ಆದರೆ, ಇಲ್ಲಿ ಈ ಕೆಲಸವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ. ಇಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ತಕ್ಷಣ ಹುಣಸೂರು ತಹಸೀಲ್ದಾರ್ ಒತ್ತುವರಿ ತೆರವು ಮಾಡಿ ತಂತಿಬೇಲಿ ಹಾಕಿ ಎರಡು ದಿನಗಳಲ್ಲಿ ವರದಿ ನೀಡಬೇಕು. ಪೊಲೀಸರು ಸಹ ಸೂಕ್ತ ರಕ್ಷಣೆ ಕಲ್ಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಹುಣಸೂರು ತಾಲೂಕು ದೊಡ್ಡಹುಣಸೂರಿನ ಇಟ್ಟಿಗೆ ತಯಾರಿಕಾ ಘಟಕಕ್ಕೆ ನಕಲಿ ದಾಖಲೆ ಸೃಷ್ಟಿಸಿ ಎನ್‌ಒಸಿ ನೀಡಿರುವ ದೂರಿನ ಕುರಿತು ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿದರು.

ಖಾತಾ ಮಾಡಿಕೊಡಲು 10 ತಿಂಗಳು ಬೇಕೆ? ಎಂದು ಹುಣಸೂರು ನಗರಸಭೆ ಅಧಿಕಾರಿಯನ್ನು ಉಪಲೋಕಾಯುಕ್ತರು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು. ದೂರದಾರ ಮೋಹನ್ ಅವರು, ಅರ್ಜಿ ಸಲ್ಲಿಸಿ 45 ದಿನದೊಳಗೆ ನೀಡಬೇಕಾಗಿರುವ ಖಾತಾವನ್ನು 10 ತಿಂಗಳಾದರೂ ನೀಡಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಜನರ ಕೆಲಸವನ್ನು ತ್ವರಿತವಾಗಿ ಮಾಡಿ. ಏಕೆ ವಿಳಂಬ ಮಾಡುತ್ತೀರಾ? ಎಂದು ಕಟುಮಾತಿನಿಂದ ಪ್ರಶ್ನಿಸಿದರು.

ಪಡಿತರ ಕಾರ್ಡ್ ಕೊಡಿಸಿ

ತನಗೆ ನೀಡಿರುವ ಬಿಪಿಎಲ್ ಕಾರ್ಡ್ ಅನ್ನು ಅಧಿಕಾರಿಗಳು ಕಿತ್ತುಕೊಂಡಿದ್ದು, ಅನ್ನಭಾಗ್ಯ ಯೋಜನೆಯೊಂದಿಗೆ ಸರ್ಕಾರದಿಂದ ದೊರೆಯುವ ಉಚಿತ ಆರೋಗ್ಯ ಸೇವೆಯೂ ದೊರೆಯುತ್ತಿಲ್ಲ ಎಂದು ಹುಣಸೂರಿನ ಸಿ.ನಟರಾಜ್ ಅಳಲು ತೋಡಿಕೊಂಡರು. ಪಡಿತರ ಚೀಟಿ ಇಲ್ಲದ ಕಾರಣಕ್ಕೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದೂ ದೂರಿದರು.

ತಕ್ಷಣ ಸ್ಥಳದಲ್ಲಿದ್ದ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಹರಿಹಾಯ್ದ ಉಪಲೋಕಾಯುಕ್ತರು, ಪಡಿತರ ಕಾರ್ಡ್ ರದ್ದು ಏಕೆ ಆಯಿತು ಎಂದು ಪ್ರಶ್ನಿಸಿದರು. ಆಗ ಅಧಿಕಾರಿಗಳು ಬಿಪಿಎಲ್ ಕಾರ್ಡ್‌ದಾರರು ಆಧಾರ್ ಲಿಂಕ್‌ನೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ನಿಯಮ ಇದೆ. ಸಕಾಲದಲ್ಲಿ ನಟರಾಜ್ ಮತ್ತು ಕುಟುಂಬದವರು ಮಾಡಿಸದ ಕಾರಣ ರದ್ದಾಗಿದೆ ಎಂದು ಸಬೂಬು ನೀಡಿದರು.

ಎಲ್ಲ ಜನರಿಗೂ ಓದು-ಬರಹ ಗೊತ್ತಿರಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದೂ ತಿಳಿದಿರಲ್ಲ. ದಾಖಲೆಗಳು ಕುರಿತು ಅರಿವೂ ಇರಲ್ಲ. ಅಂತಹವರಿಗೆ ಸರ್ಕಾರಿ ಅಧಿಕಾರಿಗಳು ಸಹಾಯ ಮಾಡಬೇಕು. ದೂರದಾರರಿಗೆ ಆಧಾರ್ ಕಾರ್ಡ್, ಆದಾಯ ಪತ್ರವನ್ನು ನೀವೇ ಮಾಡಿಸಿಕೊಟ್ಟು, ಒಂದು ತಿಂಗಳೊಳಗೆ ಪಡಿತರ ಚೀಟಿ ಕೊಡಿ ಎಂದು ತಾಕೀತು ಮಾಡಿದರು. ಉಪ ಲೋಕಾಯುಕ್ತರ ವಿರುದ್ಧವೇ ದೂರು

ಉಪ ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ದೂರು ಬಂದಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದೂರುದಾರರು ಬರೆದಿದ್ದ ಪತ್ರದ ಬಗ್ಗೆ ಉಪಲೋಕಾಯುಕ್ತ ಫಣೀಂದ್ರ ಸಿಡಿಮಿಡಿಗೊಂಡರು.

ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂಬುದರ ಸಂಬಂಧ ಹುಣಸೂರಿನ ನಾಗರಾಜು ಅವರೊಂದಿಗೆ ಸಿ.ಜಿ.ಕೃಷ್ಣ ಮೂರ್ತಿ ದೂರು ನೀಡಿದ್ದು, ದೂರಿನಲ್ಲಿ ಈ ಹಿಂದೆ ಉಪ ಲೋಕಾಯುಕ್ತರಾಗಿದ್ದ ಸುಭಾಷ್ ಅಡಿ ಅವರು ಇದ್ದಾಗ ಒತ್ತುವರಿ ವಿರುದ್ಧ ಶೀಘ್ರವೇ ಕಾರ್ಯಾಚರಣೆಯಾಗಿತ್ತು.

ಈಗ ನೀವು ಬಂದ ಮೇಲೆ ಅಧಿಕಾರಿಗಳು ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಲಾಗಿತ್ತು. ಈಗ ಉಪ ಲೋಕಾಯುಕ್ತ ಕರ್ತವ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಕಚೇರಿಯಿಂದ ನಾಗರಾಜು ಮತ್ತು ಕೃಷ್ಣ ಮೂರ್ತಿ ಅವರಿಗೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೋಟಿಸ್ ನೀಡಲಾಗಿತ್ತು.

ಇದನ್ನು ಪ್ರಸ್ತಾಪ ಮಾಡಿದ ಉಪಲೋಕಾಯುಕ್ತ ಫಣೀಂದ್ರ ಅವರು, ಸುಭಾಷ್ ಅಡಿ ಅವರು ಇದ್ದಾಗ ಎಷ್ಟು ಪ್ರಕರಣಗಳಿದ್ದವು. ಈಗ ಎಷ್ಟು ಪ್ರಕರಣಗಳಿವೆ ಎಂಬುದು ತಿಳಿದಿದೆಯೇ? ಇಂತಹ ದೂರುಗಳಿಗೆ ಕೇರ್ ಮಾಡಲ್ಲ. ನಾನು ಆತ್ಮಸಾಕ್ಷಿಯಿಂದ ಕೆಲಸ ಮಾಡುತ್ತಿದ್ದು, ದೂರಿನ ಬಗ್ಗೆ ಬೇಜಾರಿಲ್ಲ. ನನಗೆ ಯಾವುದೇ ಮುಲಾಜಿಲ್ಲ. ಆದರೆ, ವಿವೇಚನೆಯಿಂದ ಪತ್ರ ಬರೆಯಿರಿ ಎಂದು ದೂರುದಾರರಿಗೆ ಎಚ್ಚರಿಸಿದರು. ದೂರುಗಳ ತ್ವರಿತ ವಿಚಾರಣೆ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಗುರುವಾರ ದಿನವಿಡೀ ದೂರುಗಳ ವಿಚಾರಣೆ ನಡೆಸಿ ಸಮಸ್ಯೆ ಆಲಿಸಿ ಇತ್ಯರ್ಥಪಡಿಸಿದರು. ಶುಕ್ರವಾರ, ಶನಿವಾರ ಸಹ ವಿಚಾರಣೆ ಮುಂದುವರಿಯಲಿದೆ.

ಮೊದಲ ದಿನವಾದ ಇಂದು ಹುಣಸೂರು, ಸರಗೂರು ಮತ್ತು ಕೆ.ಆರ್.ನಗರ ತಾಲೂಕಿಗೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸಿದರು. ಕೆಲ ಕಾರಣಗಳಿಗೆ ಕೆಲ ಪ್ರಕರಣಗಳನ್ನು ಮುಂದೂಡಿದರು. ಇಂದಿನ 86 ಕೇಸ್‌ಗಳು ಸೇರಿದಂತೆ ಮೂರು ದಿನಗಳ ಕಾಲ ಅಂದಾಜು 258 ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.

ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿರುವ ದೂರುಗಳಾಗಿವೆ. ಪ್ರತಿ ದೂರಿನ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳ ಹಿಂದೆಯೇ ನೋಟಿಸ್ ಜಾರಿ ಮಾಡಿ ಆ ಕುರಿತು ಕೈಗೊಂಡಿರುವ ಕ್ರಮ ಏನು ಎಂಬುದರ ಮಾಹಿತಿ ಪಡೆದುಕೊಳ್ಳಲಾಗಿತ್ತು.

ಇಂದಿನ ಸಭೆಯಲ್ಲಿ ದೂರುದಾರರು ಮತ್ತು ಎದುರುದಾರರಾದ ಸರ್ಕಾರಿ ಅಧಿಕಾರಿಗಳ ಸಮಕ್ಷಮದಲ್ಲಿ ವಿಚಾರಣೆ ಪ್ರಕ್ರಿಯೆ ನಡೆಯಿತು. ದೂರುದಾರರಿಂದ ಸಮಸ್ಯೆ ಆಲಿಸಿ, ಅದಕ್ಕೆ ಏನು ಪರಿಹಾರ ಕಂಡುಕೊಳ್ಳಲಾಗಿದೆ. ಕೆಲಸ ಮಾಡಿಕೊಡುವಲ್ಲಿ ಎಲ್ಲಿ ಲೋಪವಾಗಿದೆ. ಏಕೆ ಕೆಲಸ ಮಾಡಿಕೊಟ್ಟಿಲ್ಲ...ಹೀಗೆ ಹತ್ತಾರು ಪ್ರಶ್ನೆಗಳು ಸರ್ಕಾರಿ ಅಧಿಕಾರಿಗಳಿಗೆ ಎದುರಾದವು.

ಆಯ್ದ ಕೇಸ್‌ಗಳನ್ನು ಮಾತ್ರ ವಿಚರಣೆ ನಡೆಸಲಾಯಿತು. ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಸಾರ್ವಜನಿಕ ಹಿತಾಸಕ್ತಿ, ತಾಂತ್ರಿಕ ತನಿಖಾ ವರದಿ, ಪೊಲೀಸ್ ವರದಿಯ ಅಗತ್ಯ ಇರುವ ಕೇಸ್‌ಗಳು ಇಲ್ಲಿ ಮಂಡನೆಯಾಗಲಿಲ್ಲ. ಬರೀ ಖಾಸಗಿ ಮತ್ತು ವ್ಯಕ್ತಿಗತ ಕೇಸ್‌ಗಳು ಮಾತ್ರ ವಿಚಾರಣೆಯಾದವು.

ಈ ಪೈಕಿ ಭೂವ್ಯಾಜ್ಯಗಳು ಹೆಚ್ಚು ಸದ್ದು ಮಾಡಿದವು. ಖಾತಾ, ಹದ್ದುಬಸ್ತು, ಒತ್ತುವರಿ, ಭೂ ಅಳತೆಯಲ್ಲಿ ಲೋಪ, ಯಾರದೋ ಜಾಗಕ್ಕೆ ಇನ್ನೊಬ್ಬರ ಹೆಸರು ಸೇರ್ಪಡೆ, ಭೂ ಕಾಗದ ಪತ್ರದಲ್ಲಿ ತಪ್ಪು ಮಾಹಿತಿ ನಮೂದು, ಹೀಗೆ ಹತ್ತಾರು ವಿಷಯಗಳು ವಿಚಾರಣೆಗೆ ಬಂದಿದ್ದವು. ಹೀಗಾಗಿ, ಕಂದಾಯ, ಪೌರಾಡಳಿತ, ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳೇ ಹೆಚ್ಚು ಹೊತ್ತು ವಿಚಾರಣೆ ಎದುರಿಸಿದರು.