ಜಿಲ್ಲೆ

ಸರ್ಕಾರಿ ಗೌರವದೊಂದಿಗೆ ‘ಶ್ವಾನ’ ಅಂತ್ಯಸಂಸ್ಕಾರ

ಬೆಳಗಾವಿ: ನಗರ ಪೊಲೀಸ್ ಆಯುಕ್ತರ ಕಚೇರಿಯ ಅಪರಾಧ ಪತ್ತೆ ವಿಭಾಗದಲ್ಲಿದ್ದ 11.9ವರ್ಷದ ರ‌್ಯಾಂಬೋ ಹೆಸರಿನ ಶ್ವಾನ ಅನಾರೋಗ್ಯದಿಂದ ನಿಧನವಾದ ಹಿನ್ನೆಲೆಯಲ್ಲಿ ಶನಿವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಜರ್ಮನ್ ಶೆಫರ್ಡ್ ತಳಿಗೆ ಸೇರಿದ್ದ ಶ್ವಾನ 2009ರ ಅಕ್ಟೋಬರ್ 2 ರಂದು ಜನಿಸಿತ್ತು. ಬೆಂಗಳೂರಿನ ಆಡುಗೋಡಿಯಲ್ಲಿರುವ ರಾಜ್ಯ ಪೊಲೀಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ 2 ವರ್ಷ ತರಬೇತಿ ಪೂರೈಸಿತ್ತು. ಬಳಿಕ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಅಪರಾಧ ಪತ್ತೆ ವಿಭಾಗದಲ್ಲಿ ಸೇವೆ ಸಲ್ಲಿಸಿತ್ತು.

ತದನಂತರ ನಗರದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಆರಂಭವಾದ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಯಿಂದ ಪೊಲೀಸ್ ಆಯುಕ್ತರ ಕಚೇರಿಗೆ ರ‌್ಯಾಂಬೋ ವರ್ಗಾವಣೆಗೊಂಡಿತ್ತು. 2017-18ರ ಸಾಲಿನಲ್ಲಿ ನಡೆದ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟದ ಅಪರಾಧ ವಿಭಾಗದಲ್ಲಿ ರ‌್ಯಾಂಬೋ ಎರಡನೇ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿತ್ತು.

ವಿವಿಧ ಅಪರಾಧಿಗಳ ಪತ್ತೆಗೆ ನೆರವಾಗಿದ್ದ ಶ್ವಾನ: ಬೆಳಗಾವಿಯ ಕುವೆಂಪು ನಗರದ ತಾಯಿ ಹಾಗೂ ಇಬ್ಬರು ಮಕ್ಕಳ ಕೊಲೆ ಆರೋಪಿಯನ್ನು ರ‌್ಯಾಂಬೋ ಪತ್ತೆ ಹಚ್ಚಿತ್ತು. ಅಲ್ಲದೆ, ಎಪಿಎಂಸಿ, ಟಿಳಕವಾಡಿ, ಮಾಳಮಾರತಿ, ಕ್ಯಾಂಪ್, ಮಾರಿಹಾಳ, ಉದ್ಯಮಬಾಗ ಹಾಗೂ ಕಾಕತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಲವು ಅಪರಾಧ ಕೃತ್ಯಗಳ ಆರೋಪಿಗಳ ಸುಳಿವನ್ನು ರ‌್ಯಾಂಬೋ ನೀಡುವ ಮೂಲಕ ತನಿಖಾ ಅಧಿಕಾರಿಗಳಿಗೆ ಸಹಾಯ ಮಾಡಿತ್ತು.