ಧಾರವಾಡ: ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಕಾರಣಕ್ಕೆ ಹು-ಧಾ ಅವಳಿನಗರದ ವಿವಿಧೆಡೆ ಸರ್ಕಾರಿ ಕ್ವಾರಂಟೈನ್ಗೆ ಒಳಪಟ್ಟಿದ್ದ 63 ಜನರಿಗೆ ಬುಧವಾರ ಸಪ್ನಾ ಬುಕ್ಹೌಸ್ನ ಗಿಫ್ಟ್ ವೋಚರ್, ಸಂಜಯ್ ಗೊಡಾವತ್ ಅವರು ನೀಡಿದ ಆಹಾರ ಧಾನ್ಯದ ಕಿಟ್ಗಳನ್ನು ನೀಡಿ ಬೀಳ್ಕೊಡಲಾಯಿತು.
ಏ. 2ರಿಂದ 20ರವರೆಗೆ ಒಟ್ಟು 303 ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಈ ಪೈಕಿ ಮಂಗಳವಾರ 84 ಹಾಗೂ ಬುಧವಾರ 63 ಜನರನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ. 14 ದಿನಗಳ ಪ್ರತ್ಯೇಕ ವಾಸದಲ್ಲಿ 5ನೇ ದಿನ ಮೊದಲ ಬಾರಿ ಗಂಟಲ ಮತ್ತು ಮೂಗಿನ ದ್ರವ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗುತ್ತದೆ. 12ನೇ ದಿನ 2ನೇ ಬಾರಿ ತಪಾಸಣೆ ನಡೆಸಲಾಗುತ್ತದೆ. ಎರಡೂ ವರದಿಗಳು ನೆಗೆಟಿವ್ ಬಂದ ನಂತರ ಕ್ವಾರಂಟೈನ್ನಿಂದ ಬಿಡುಗಡೆ ಮಾಡಲಾಗುತ್ತದೆ. ನಂತರ ಮನೆಯಲ್ಲೇ 14 ದಿನ ಪ್ರತ್ಯೇಕವಾಗಿ ವಾಸಿಸಬೇಕು ಎಂದು ಸೂಚಿಸಿ ಅವರ ಕೈ ಮೇಲೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದ ಮೊಹರು ಹಾಕಿ ಕಳುಹಿಸಲಾಗುತ್ತಿದೆ.
ಕ್ವಾರಂಟೈನ್ನಿಂದ ಬಿಡುಗಡೆಯಾದ ಮಕ್ಬೂಲ್ ಬಸಾಪುರ ಮಾತನಾಡಿ, ಸರ್ಕಾರ ಮಾರ್ಚ್ನಲ್ಲಿ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಬಂದವರನ್ನು ಕ್ವಾರಂಟೈನ್ಗೆ ಒಳಪಡಿಸುವಂತೆ ಸೂಚಿಸಿತ್ತು. ನಾನು ಫೆಬ್ರವರಿಯಲ್ಲಿ ಅಲ್ಲಿಗೆ ಹೋಗಿ ಬಂದಿದ್ದೆ. ಆದರೂ ಮುಂಜಾಗ್ರತೆ ಕ್ರಮವಾಗಿ ಸ್ವಇಚ್ಛೆಯಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ಭೇಟಿಯಾಗಿ ವಿಷಯ ತಿಳಿಸಿದೆ. ಅವರು ಹೇಳಿದಂತೆ ಕುಟುಂಬದ ಹಿತದೃಷ್ಟಿಯಿಂದ ಕ್ವಾರಂಟೈನ್ಗೆ ಒಳಪಟ್ಟೆ. ಈ ಅವಧಿಯಲ್ಲಿ ಸರ್ಕಾರ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ತವ್ಯ ನಿರತ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಊಟ, ಉಪಾಹಾರದ ವ್ಯವಸ್ಥೆ ಮಾಡಿದ್ದಾರೆ. ರೋಗ ಲಕ್ಷಣ ಇರುವವರು ಸ್ವಇಚ್ಛೆಯಿಂದ ಮುಂದೆ ಬಂದು ಚಿಕಿತ್ಸೆ ಪಡೆದು ಕರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕ್ವಾರಂಟೈನ್ ಕರ್ತವ್ಯ ನಿರ್ವಹಿಸಿದ ಡಾ. ಕಿರಣ ಸಾಣಿಕೊಪ್ಪ ಮಾತನಾಡಿರು. ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ್, ತಹಸೀಲ್ದಾರರಾದ ಸಂತೋಷ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ ಪಾಟೀಲ, ಇತರರಿದ್ದರು.