?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸರ್ಕಾರಿ ಕಾಲೇಜು ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಬೀದರ್: ಇಲ್ಲಿಯ ಜನವಾಡ ರಸ್ತೆಯಲ್ಲಿ ಇರುವ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರು ಮೂಲಸೌಕರ್ಯಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಲೇಜು ಆವರಣದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ, ಜಿಲ್ಲಾಧಿಕಾರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಸೇರಿ ಕಾಲೇಜಿನಲ್ಲಿ 510 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಕಾಲೇಜು ಸದಾ ಒಂದಿಲ್ಲೊಂದು ಸಮಸ್ಯೆಗಳಿಂದ ನರಳುತ್ತಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ದೂರಿದರು.
ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವ ಕಾರಣ ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ಪಾಠ, ಪ್ರವಚನ ಆಲಿಸುವಂತಾಗಿದೆ. ಮಳೆಗಾಲದಲ್ಲಿ ವರ್ಗ ಕೋಣೆಗಳಲ್ಲಿ ನೀರು ನಿಲ್ಲುತ್ತದೆ. ಸುತ್ತುಗೋಡೆ ಇಲ್ಲದೇ ಇರುವುದರಿಂದ ಹಂದಿ, ನಾಯಿಗಳ ಕಾಟ ಅಧಿಕವಾಗಿದೆ. ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಇಲ್ಲ ಎಂದು ಹೇಳಿದರು.
ಕಾಲೇಜಿನ ಕಟ್ಟಡದ ನೋಂದಣಿ ಕಾಲೇಜು ಹೆಸರಲ್ಲೇ ಮಾಡಿಸಬೇಕು. ಸೋರುತ್ತಿರುವ ವರ್ಗ ಕೋಣೆಗಳನ್ನು ದುರಸ್ತಿಪಡಿಸಬೇಕು. ಕೂಡಲೇ ಸುತ್ತುಗೋಡೆ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ 10 ಶೌಚಾಲಯ ನಿರ್ಮಿಸಬೇಕು. ವರ್ಗ ಕೋಣೆಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಐದು ಹೆಚ್ಚುವರಿ ವರ್ಗ ಕೋಣೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪರಿಷತ್ ನಗರ ಘಟಕದ ಕಾರ್ಯದರ್ಶಿ ಅಂಬರೀಷ್ ಬಿರಾದಾರ, ಪ್ರಮುಖರಾದ ರಮೇಶ ಮಿರ್ಜಾಪುರೆ, ಅನಿಲ್ ಜಾಧವ್, ಶಿವಾನಿ ಪಾಟೀಲ, ರೇಣುಕಾ, ಅಂಬಿಕಾ, ಸಂಜನಾ, ಪ್ರಿಯದರ್ಶಿನಿ, ಜ್ಯೋತಿ, ಆಶಾ, ಪಲ್ಲವಿ, ಯಾಸಮೀನ್, ನುಮೇರಾ, ಕಲ್ಪನಾ ಬಾವಗಿ, ಲಾವಣ್ಯ ಮುದ್ದಾ, ಅಪೇಕ್ಷಾ ಮಂಗಲಗಿ, ಭಾರತಿ ಮಹಾಗಾಂವೆ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.