ಹಾಸನ: ಕುವೆಂಪು ಅವರ ಒಂದಲ್ಲಾ ಒಂದು ವಿಚಾರಗಳಿಂದ ಪ್ರತಿಯೊಬ್ಬರು ಪ್ರೇರಿತರಾಗಿದ್ದೇವೆ. ಕಾಲೇಜಿನಲ್ಲಿ ಕುವೆಂಪು ಅವರ ಪುತ್ಥಳಿ ಅನಾವರಣಗೊಳಿಸಿರುವುದು ಸಂತಸದ ವಿಷಯ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.
ಹಾಸನ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ, ಕಾಲೇಜಿನ ಆವರಣದಲ್ಲಿ ಶನಿವಾರ ಕುವೆಂಪು ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಕುವೆಂಪು ಪುತ್ಥಳಿಯ ಸ್ಥಾಪನೆಗೆ ಶ್ರಮಿಸಿದ ಎಲ್ಲರನ್ನು ಸ್ಮರಿಸಿದರು. ಕುವೆಂಪು ಅವರು ನಡೆದ ಬಂದ ದಾರಿಯನ್ನು ಯುವಕರು ಅನುಸರಿಸಬೇಕು. ಕುವೆಂಪು ಅವರನ್ನು ಪ್ರೇರಕ ಶಕ್ತಿಯನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ ಮಾತನಾಡಿ, ಕುವೆಂಪು ಮಹಾನ್ ಕವಿ. ಅವರ ಸಾಹಿತ್ಯವನ್ನು ನಾನು ಓದಿಕೊಂಡಿದ್ದೇನೆ. ಅವರ ಪುಸ್ತಕಗಳನ್ನು ಯುವ ಪೀಳಿಗೆ ಓದಬೇಕು. ಜ್ಞಾನ ಹೆಚ್ಚಿಸಿಕೊಳ್ಳಬೇಕು. ಅವರ ಕೃತಿಗಳಾದ ನೆನಪಿನ ದೋಣಿ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಶ್ರೇಷ್ಠ ಕೃತಿಗಳಾಗಿದ್ದು, ಇವುಗಳನ್ನು ಎಲ್ಲರೂ ಓದಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ಎಂದರೆ ಕುವೆಂಪು ಅವರಿಗೆ ಅಚ್ಚುಮೆಚ್ಚು. ಮಾನಸಗಂಗೋತ್ರಿ ಅವರ ದೂರದೃಷ್ಟಿಯ ಪ್ರತೀಕ. ಅರ್ಥಪೂರ್ಣ ಸಂವೇದನೆಯನ್ನು ಹೊಂದಿದ್ದರು. ಅವರ ಒಂದೊಂದು ಕಾವ್ಯದಲ್ಲಿಯೂ ವೈಜ್ಞಾನಿಕ, ಪ್ರಾಕೃತಿಕ, ವೈಚಾರಿಕ ಪ್ರಜ್ಞೆ ಇತ್ತು. ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪಾಲಾಕ್ಷ ಜಿ. ಮಹೇಂದ್ರಕುಮಾರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಮಲ್ಲೇಗೌಡ, ಪುಟ್ಟಸ್ವಾಮಿಗೌಡ, ಕಾಲೇಜಿನ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಪರೀಕ್ಷಾ ನಿಯಂತ್ರ ಡಾ. ಕೆ.ಡಿ.ಮುರಳೀಧರ್, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಉಪಸ್ಥಿತರಿದ್ದರು.