ಜಿಲ್ಲೆ

ಸರ್ಕಾರಿ ಕಚೇರಿಯಲ್ಲಿ ಕಳ್ಳತನ

ಮೈಸೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯ ಭರತ್‌ನಗರದಲ್ಲಿರುವ ಸರ್ಕಾರಿ ಕಚೇರಿಗೆ ನುಗ್ಗಿರುವ ಕಳ್ಳರು, ಟೇಬಲ್ ಲಾಕರ್‌ನಲ್ಲಿದ್ದ 18,130 ರೂ. ಹಣವನ್ನು ಕದ್ದಿದ್ದಾರೆ.

ಅಧಿಕಾರಿಗಳು ಸಂಜೆ 6.30ಕ್ಕೆ ಕಚೇರಿಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ 10ಕ್ಕೆ ಕಚೇರಿಗೆ ಬಂದಾಗ ಬಾಗಿಲಿನ ಬೀಗ ಮುರಿದಿತ್ತು. ಒಳಹೋಗಿ ನೋಡಿದಾಗ ಕಡತಗಳು ಸೇರಿದಂತೆ ಕಚೇರಿಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಟೇಬಲ್ ಲಾಕರ್‌ನಲ್ಲಿ ಇಟ್ಟಿದ್ದ ಹಣ ಕಾಣೆಯಾಗಿದೆ. ಅಲ್ಲಿ ಸಾಲ ವಸೂಲಿ ಮಾಡಿದ ಹಣವನ್ನು ಇಡಲಾಗಿತ್ತು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್.ನಾಗೇಂದ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಎನ್.ಆರ್.ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.