ಹಾಸನ: ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ 46 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸಿಎನ್‌ಸಿ ಲ್ಯಾಬ್ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕ ಮಂಜುನಾಥ್ ಕಾಳಿಂಗಪ್ಪ ತಿಳಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ಪಡೆಯಬೇಕೆಂಬುದು ನಮ್ಮ ಆಶಯವಾಗಿತ್ತು. ಇದಕ್ಕಾಗಿ ನಾವು ಎಫ್‌ಎಎನ್‌ಯುಸಿ ಪ್ರೈ.ಲಿ. ಇವರ ವತಿಯಿಂದ ಹಾಸನದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಇದೇ ತಿಂಗಳ ಅಂತ್ಯದಲ್ಲಿ ಎಫ್‌ಎಎನ್‌ಯುಸಿ ಸಿಎನ್‌ಸಿ ಲ್ಯಾಬ್ ಪ್ರಾರಂಭಿಸುತ್ತಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಮಾರು ಆರು ತಿಂಗಳಿಂದ ಎಫ್‌ಎಎನ್‌ಯುಸಿ ಸಂಸ್ಥೆಯೊಂದಿಗೆ ಮಾತನಾಡಿ ಈ ಭಾಗದ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡಬೇಕೆಂದು ಮನವರಿಕೆ ಮಾಡಿಕೊಟ್ಟು ಈ ಲ್ಯಾಬ್ ಮಾಡಿಕೊಡುತ್ತಿದ್ದೇವೆ. ಈ ಲ್ಯಾಬ್‌ನಲ್ಲಿ 27 ಲಕ್ಷದ ಸಿಎನ್‌ಸಿ ಮಿಷನ್, ಅದಕ್ಕೆ ಬೇಕಾದ 16 ಸಾಫ್ಟ್‌ವೇರ್ ಲೈಸೆನ್ಸ್‌ಗಳು, 16 ಕಂಪ್ಯೂಟರ್‌ಗಳು, ಸಿಸಿಟಿವಿ ಕ್ಯಾಮೆರಾ, ಯುಪಿಎಸ್ ಮತ್ತು ಪ್ರಿಂಟರ್ಸ್ ಕೂಡ ಒಳಗೊಂಡಿರುತ್ತವೆ ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲ ಎಚ್.ಪಿ. ಮಂಜುನಾಥ್ ಮಾತನಾಡಿ, ಮಂಜುನಾಥ್ ಕಾಳಿಂಗಪ್ಪ ಅವರು ನಮ್ಮ ಕಾಲೇಜಿಗೆ ಸ್ವತಃ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಅವರೊಂದಿಗೆ ಚರ್ಚಿಸಿ ಈ ಸಂಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿಯ ಅವಶ್ಯಕತೆ ಇದೆ ಎಂದು ಅವರಿಗೆ ತಿಳಿಸಿದ ಕಾರಣಕ್ಕೆ ಅವರು ಅದನ್ನು ಮನಗಂಡು ಎಫ್‌ಎಎನ್‌ಯುಸಿ ಸಂಸ್ಥೆಯೊಂದಿಗೆ ಮಾತನಾಡಿ, ಈ ಅವಕಾಶವನ್ನು ಮಾಡಿಕೊಡುತ್ತಿರುವುದು ನಮ್ಮ ಅದೃಷ್ಟ. ಇದರಿಂದ ಪ್ರತಿವರ್ಷ ಸಾವಿರಾರು ಮಕ್ಕಳಿಗೆ ಹೊಸ ತಂತ್ರಜ್ಞಾನದ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸಿಬ್ಬಂದಿ ಉಮೈ ಅಸ್ಮ, ಪ್ರದೀಪ್, ಶ್ರೀನಿವಾಸ್, ಚಂದ್ರಪ್ಪ ಇತರರು ಉಪಸ್ಥಿತರಿದ್ದರು.