ಜಿಲ್ಲೆ

ಸರ್ಕಾರಿ ಉದ್ಯೋಗ ಸಚಿವರ ಭರವಸೆ

ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣ ಸಂಬಂಧ ಮೃತ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲು ಸಮಾಜ ಕಲ್ಯಾಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್.ಮೂರ್ತಿ ಬಣ) ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ ತಿಳಿಸಿದರು.


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕವಾಡಿಗರಹಟ್ಟಿಯ ನೊಂದ ಕುಟುಂಬಗಳ ಪರ ಸಮಿತಿಯ ರಾಜ್ಯ ಅಧ್ಯಕ್ಷ ಡಾ.ಎನ್.ಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಅಲ್ಲದೆ, ಸಚಿವರ ನಿವಾಸಕ್ಕೆ ನಿಯೋಗ ಹೋಗಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದು, ಯಾವುದಾದರೂ ನೌಕರಿ ಸಿಗುವ ವಿಶ್ವಾಸವಿದೆ ಎಂದರು.


ಕವಾಡಿಗರಹಟ್ಟಿಗೆ ಮೂಲಸೌಕರ್ಯ ಕಲ್ಪಿಸಲು ಮುಂದಾಗದಿದ್ದರೆ ಸಮಿತಿ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.


ಮುಖಂಡರಾದ ಜೆಜೆ ಹಟ್ಟಿ ಶಿವಣ್ಣ, ಚೆನ್ನಿಗರಾಮಯ್ಯ, ಎಂ.ಆರ್.ಶಾಂತಕುಮಾರ್, ಎನ್.ರಂಗಸ್ವಾಮಿ, ವೀರಭದ್ರಪ್ಪ, ಸುರೇಶ್, ಬಿ.ಎಚ್.ಪರಮೇಶ್, ವೆಂಕಟೇಶ್, ಎಚ್.ಹೊನ್ನೂರಪ್ಪ ಇತರರಿದ್ದರು.