ಜಿಲ್ಲೆ

ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಮಾರಾಟ!, ಒಂದು ಡೋಸ್‌ಗೆ 300 ರೂ. ವಸೂಲಿ, ವಿಜಯವಾಣಿ-ದಿಗ್ವಿಜಯ ನ್ಯೂಸ್ ರಹಸ್ಯ ಕಾರ್ಯಾಚರಣೆ

ಆನೇಕಲ್: ಕರೊನಾ ಸೋಂಕಿನ 3ನೇ ಅಲೆಯ ಸಾಧ್ಯತೆಯ ನಡುವೆ ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಉತ್ತಮ ಸಾಧನೆ ಮಾಡುತ್ತಿದೆ. ಇದರ ನಡುವೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿ ಒಂದು ಡೋಸ್‌ಗೆ 300 ರೂ.ನಂತೆ ಅಕ್ರಮವಾಗಿ ಲಸಿಕೆ ಮಾರಾಟ ಮಾಡುತ್ತಿರುವ ಆತಂಕಕಾರಿ ಸಂಗತಿ ವಿಜಯವಾಣಿ-ದಿಗ್ವಿಜಯ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ಆನೇಕಲ್ ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇಂಥ ಅಕ್ರಮ ಎಸಗಲಾಗುತ್ತಿದೆ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ವಿಜಯವಾಣಿ-ದಿಗ್ವಿಜಯ ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿದಾಗ, 300 ರೂ. ಪಡೆದು ಹೆಬ್ಬಗೋಡಿ ಸರ್ಕಾರಿ ಆಸ್ಪತ್ರೆಯ ನರ್ಸ್‌ವೊಬ್ಬರು ಮನೆಯಲ್ಲಿ ಒಬ್ಬರಿಗೆ ಲಸಿಕೆ ನೀಡುತ್ತಿರುವ ಕಳ್ಳದಂಧೆ ಬಯಲಾಯಿತು.

ಅಧಿಕಾರಿಗಳ ಭೇಟಿ: ದಿಗ್ವಿಜಯ ನ್ಯೂಸ್‌ನಲ್ಲಿ ಲಸಿಕೆಯ ಅಕ್ರಮ ಮಾರಾಟದ ಬಗ್ಗೆ ವಿಸ್ತೃತ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಮಹೇಶ್ ಹಾಗೂ ತಾಲೂಕು ವೈದ್ಯಾಧಿಕಾರಿ ವಿನಯ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮಾಹಿತಿ ಸಂಗ್ರಹಿಸಿದರು. ಬಳಿಕ ಅವರೆಲ್ಲರ ವಿರುದ್ಧ ಕ್ರಮ ಕೈಗೊಂಡರು.

ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಇಲಾಖೆ ಲಸಿಕೆ ಹಾಕುವ ವಿಷಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇಂಥ ಇಂತಹ ಸಮಯದಲ್ಲಿ ನರ್ಸ್ ಒಬ್ಬರು ಅಕ್ರಮವಾಗಿ ಲಸಿಕೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅವರನ್ನು ಕೂಡಲೇ ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ. ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಸರ್ಕಾರದಿಂದ ಉಚಿತವಾಗಿ ಕೊಡುವ ಲಸಿಕೆಯ ಸೌಲಭ್ಯ ಎಲ್ಲರನ್ನೂ ತಲುಪುವಂತೆ ಆಗಬೇಕು. ಅಕ್ರಮ ಎಸಗಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೇಲಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಡಾ. ಮಹೇಶ್, ನೋಡಲ್ ಅಧಿಕಾರಿ ಮನೆಯಲ್ಲಿ ಜನರಿಗೆ ಕರೊನಾ ಲಸಿಕೆ ಹಾಕಿದ್ದು ನಿಜ. ಆದರೆ, ಅದಕ್ಕಾಗಿ ಹಣ ಪಡೆದಿಲ್ಲ. ಹಣ ಪಡೆದಿರುವುದಾಗಿ ಸುಳ್ಳು ಮಾಹಿತಿ ನೀಡಲಾಗಿದೆ. ರೇಖಾ, ನರ್ಸ್