ಜಿಲ್ಲೆ

ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಲೋಕಾರ್ಪಣೆ

ಹಾನಗಲ್ಲ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ನೂತನ ಆಂಬುಲೆನ್ಸ್ ಅನ್ನು ಶಾಸಕ ಸಿ.ಎಂ. ಉದಾಸಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಆಂಬುಲೆನ್ಸ್ ಮಂಜೂರಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಬಳಸಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 7 ಆಂಬುಲೆನ್ಸ್​ಗಳು ಸೇವೆ ಸಲ್ಲಿಸುತ್ತಿದ್ದು, ಹಾನಗಲ್ಲ, ತಿಳವಳ್ಳಿ ಹಾಗೂ ಆಡೂರ ಆಸ್ಪತ್ರೆಗಳಲ್ಲಿ 108 ವಾಹನ ಸೇವೆಗೆ ಲಭ್ಯವಿವೆ. ಹಾನಗಲ್ಲನಲ್ಲಿ ನಗು- ಮಗು ವಾಹನ, ಹಾನಗಲ್ಲ, ತಿಳವಳ್ಳಿ ಹಾಗೂ ಅಕ್ಕಿಆಲೂರಲ್ಲಿ ಒಳರೋಗಿಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸಲು 3 ವಾಹನ ಲಭ್ಯವಿದೆ ಎಂದರು.

ಈ ಮೊದಲು ಪೊಲೀಸ್ ಸೇವೆಗಾಗಿ 100, ಅಗ್ನಿಶಾಮಕ ನೆರವಿಗೆ 101, ಆರೋಗ್ಯ ಸೇವೆಗಾಗಿ 108 ಸಹಾಯವಾಣಿ ಸಂಖ್ಯೆ ಲಭ್ಯವಿತ್ತು. ಆದರೆ, ಸರ್ಕಾರ ಒನ್ ಇಂಡಿಯಾ-ಒನ್ ಎಮೆರ್ಜೆನ್ಸಿ ಯೋಜನೆಯಡಿ ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ 112 ಸಂಖ್ಯೆಯಿಂದಲೇ ಎಲ್ಲ ಸೇವೆ ಪಡೆಯಬಹುದಾಗಿದೆ. ಈ ತುರ್ತು ಸೇವೆಗಾಗಿ ನಿರ್ಭಯಾ ನಿಧಿಯಡಿ 321 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. 112 ಸಹಾಯವಾಣಿಗೆ ಕರೆ ಮಾಡಿದರೆ, ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಸಂತ್ರಸ್ತರಿಗೆ ಸಂಬಂಧಪಟ್ಟ ಪ್ರದೇಶಗಳ ವಾಹನಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ರವೀಂದ್ರಗೌಡ ಪಾಟೀಲ, ಡಾ.ರೋಹಿತ್, ಡಾ.ಎಸ್.ವೈ. ಹಾದಿಮನಿ, ಡಾ.ಪ್ರವೀಣ ಪುಕಾಳೆ, ಡಾ.ಬಸೀರಾ ನಾಶಿಪುಡಿ, ಡಾ.ಅಖಿಲೇಶ ಮಾಳವದೆ, ಡಾ.ಆದರ್ಶ, ಡಾ. ಹರೀಶ, ಡಾ.ಶೇಖ, ಡಾ.ಸುನೀಲ ಹಿರೇಮಠ, ಕೆಂಚಪ್ಪ, ಸುಭಾಸ ಚೊಗಚಿಕೊಪ್ಪ, ಶಿವಲಿಂಗಪ್ಪ ತಲ್ಲೂರ, ಕಲ್ಯಾಣಕುಮಾರ ಶೆಟ್ಟರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಹಸೀನಾಬಿ ನಾಯ್ಕನವರ, ಚಮನಸಾಬ ಕಿತ್ತೂರ, ಸಂತೋಷ ಟೀಕೋಜಿ, ಮಂಜುನಾಥ ಬಸವಂತಕರ, ಸಂತೋಷ ಭಜಂತ್ರಿ, ನಿಯಾಜ ಉಪ್ಪಿನ, ಜಮೀರ ದರ್ಗಾ, ಶಿವು ಹಳೇಕೋಟಿ, ಭಾಸ್ಕರ ಹುಲಮನಿ, ಚಂದ್ರು ಉಗ್ರಣ್ಣನವರ ಇತರರಿದ್ದರು.