ಗೌರಿಬಿದನೂರು : ಜಿಲ್ಲೆಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಎಂಜಿ ವೃತ್ತದಲ್ಲಿ ನಗರಸಭೆಯ ನಗರೋತ್ಥಾನದ 7.5 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಈ ನೀತಿಯಡಿ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ರಿಯಾಯಿತಿ ದೊರೆಯುವುದರಿಂದ ಗ್ರಾಮೀಣ ಭಾಗದಲ್ಲಿ ವಿವಿಧ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಬಯಲುಸೀಮೆ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲು ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ ಎಂದರು.
ಗೌರಿಬಿದನೂರು ನಗರ ಪ್ರದೇಶದ ವ್ಯಾಪ್ತಿ ವಿಸ್ತರಿಸಿದ್ದು, ರಸ್ತೆಗಳ ಅಭಿವೃದ್ಧಿಯಾಗಬೇಕಿದೆ. ಈಗ ನಗರೋತ್ಥಾನದ 7.5 ಕೋಟಿ ರೂ. ಯೋಜನೆಯಡಿ 3.5 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿಕೆ ಅನುದಾನ ಹಂತಹಂತವಾಗಿ ಬಿಡುಗಡೆಯಾಗಲಿದೆ. ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಸರ್ಕಾರದಿಂದ ದೊರಕಿಸಿಕೊಡಲಾಗುವುದು.
ಜಿಲ್ಲೆಗೆ ಆಂಧ್ರದ ನೀರು : ಎಚ್.ಎನ್.ವ್ಯಾಲಿ ನೀರು ಈಗಾಗಲೆ ಚಿಕ್ಕಬಳ್ಳಾಪುರಕ್ಕೆ ಹರಿದಿದ್ದು ಮುಂದಿನ ದಿನಗಳಲ್ಲಿ ಗೌರಿಬಿದನೂರಿಗೂ ಹರಿಯಲಿದೆ. ಎತ್ತಿನಹೊಳೆ ಯೋಜನೆ ಪೂರ್ಣವಾದಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ. ನೆರೆಯ ಆಂಧ್ರದ ಹಿಂದೂಪುರದ ಲೇಪಾಕ್ಷಿಗೆ ಬರುತ್ತಿರುವ ನೀರಿನ ಪೈಕಿ 5-10 ಟಿಂಎಸಿ ನೀರನ್ನು ರಾಜ್ಯದ ಗಡಿ ತಾಲೂಕುಗಳಿಗೂ ಹರಿಸುವುದು. ಆ ನೀರಿನ ಬದಲಿಗೆ ಆಂಧ್ರಕ್ಕೆ ರಾಜ್ಯದ ಬೇರೆ ಮೂಲದಿಂದ ನೀರು ಹರಿಸುವುದು ಎಂಬುದರ ಕುರಿತು ಚಿಂತನೆ ನಡೆದಿದೆ. ಈ ಕುರಿತು ಈಗಾಗಲೇ ರಮೇಶ್ ಜಾರಕಿಹೊಳಿ ಅವರು ಚರ್ಚಿಸಿದ್ದು, ಮುಖ್ಯಮಂತ್ರಿಗಳು ಆಂಧ್ರದ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ಎ.ಬಿ. ಚಿಕ್ಕನರಸಿಂಹಯ್ಯ , ಜಿಲ್ಲಾಧಿಕಾರಿ ಆರ್. ಲತಾ, ಜಿಪಂ ಸಿಇಒ ೌಜಿಯಾ ತರನ್ನುಮ್, ಎಸ್‌ಪಿ ಮಿಥುನ್ ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಆಯುಕ್ತ ಜಿ.ಎನ್. ಚಲಪತಿ, ಜಿಪಂ ಮಾಜಿ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಮುಖಂಡರಾದ ಬಿ.ಜಿ. ವೇಣುಗೋಪಾಲರೆಡ್ಡಿ, ಬಿ.ಎನ್. ರಂಗನಾಥ್ ಮತ್ತಿತರರಿದ್ದರು.