ಶೃಂಗೇರಿ: ರಾಜ್ಯದಲ್ಲಿ ಆರು ಕೋಟಿ ಜನಸಂಖ್ಯೆಯಿದ್ದು ಸರ್ಕಾರದ ಬಜೆಟ್ ನಾಲ್ಕೂವರೆ ಲಕ್ಷ ಕೋಟಿ ಮೊತ್ತದ್ದಾಗಿದೆ. ಯಾವುದೇ ಸರ್ಕಾರವಿರಲಿ ಶೇ.1ರಷ್ಟು ಉದ್ಯೋಗ ಸೃಷ್ಟಿಮಾಡಲು ಸಾಧ್ಯ. ಉಳಿದ ಶೇ.99ರಷ್ಟು ಉದ್ಯೋಗ ಸೃಷ್ಟಿ ಕಂಪನಿಗಳಿಂದ ಮಾತ್ರ ಸಾಧ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶನಿವಾರ ಜೆಸಿಬಿಎಂ ಕಾಲೇಜಿನಲ್ಲಿ ಅಮ್ಮ ಫೌಂಡೇಶನ್, ಬೆಂಗಳೂರು ಉದ್ಯೋಗದಾತ ಫೌಂಡೇಶನ್‌ನಿಂದ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಶಾಸಕರು ಅಥವಾ ಸಂಸದರು ಉದ್ಯೋಗಕ್ಕಾಗಿ ಶಿಫಾರಸು ಪತ್ರ ನೀಡಿದರೂ ಉಪಯೋಗಕ್ಕೆ ಬರುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲವಾಣೆ ತರಬೇಕಿದೆ. ಕಸ್ತೂರಿ ರಂಗನ್ ಅವರು ಕೇಂದ್ರ ಸರ್ಕಾರಕ್ಕೆ ಬರೆದ ವರದಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಲ್ಲೇಖಿಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಶೇ.11ರಷ್ಟು ವಿದ್ಯಾವಂತರಿದ್ದು ಪ್ರಸ್ತುತ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಶಿಕ್ಷಣ ಹಾಗೂ ಆರೋಗ್ಯ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದರು.
ಅಪ್ರಾಮಾಣಿಕತೆ ಹಾಗೂ ಅಪರಾಧ ಹೆಚ್ಚಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಪ್ರಮುಖವಾದರೆ ಮಾತ್ರ ಭಾರತ ಪ್ರಗತಿ ಹೊಂದಲು ಸಾಧ್ಯ. ಜನಪ್ರತಿನಿಧಿಗಳು ತಪ್ಪು ಮಾಡಿದರೂ ಅದನ್ನು ಸ್ವಯಂಪ್ರೇರಿತರಾಗಿ ಒಪ್ಪಿಕೊಳ್ಳುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಬರಬೇಕಿದೆ ಎಂದರು.
ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್ ಎಸ್. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ಮೆಟ್ಟಿಲನ್ನೂ ಹತ್ತಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರು ಮುಂತಾದ ನಗರಗಳಿಂದ 28ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳಕ್ಕೆ ಬಂದಿದ್ದು, ಯುವಪೀಳಿಗೆ ಅವಕಾಶ ಬಳಸಿಕೊಳ್ಳಬೇಕಿದೆ. ಉದ್ಯೋಗವನ್ನು ನಾವು ಪ್ರೀತಿಸಬೇಕು. ಸುಮಾರು 2,750 ಉದ್ಯೋಗ ಅವಕಾಶವಿದ್ದು, ವೇತನ ಎಷ್ಟೇ ಬಂದರೂ ಮೊದಲು ಕೆಲಸಕ್ಕೆ ಸೇರಿಕೊಳ್ಳಬೇಕು. ಕಂಪನಿಗಳ ಜ್ಞಾನ ಪಡೆದುಕೊಂಡ ಬಳಿಕ ಉನ್ನತ ಉದ್ಯೋಗ ಗಿಟ್ಟಿಸಲು ಹೆಚ್ಚು ಅವಕಾಶವಿದೆ ಎಂದು ತಿಳಿಸಿದರು.
ಅಧ್ಯಕ್ಷ ಭರತ್ ಗಿಣಕಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಪೀಳಿಗೆ ಉದ್ಯೋಗ ಮೇಳದ ಅವಕಾಶವನ್ನು ಸುಧಾಕರ್ ಶೆಟ್ಟಿ ಒದಗಿಸಿಕೊಟ್ಟಿದ್ದಾರೆ. ಅದರ ಸದುಪಯೋಗ ಪಡೆಯಬೇಕು. ವಿದ್ಯಾರ್ಥಿಗಳು ಗುರುಗಳು ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಮಾಜಿ ಅಧ್ಯಕ್ಷ ಜಿ.ಜಿ.ಮಂಜುನಾಥ್, ಉದ್ಯಮಿ ತಲವಾನೆ ಪ್ರಕಾಶ್, ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ, ಉದ್ಯೋಗದಾತ ಫೌಂಡೇಶನ್ ಅಧ್ಯಕ್ಷ ರುಕ್ಮಾಂಗದ, ಜೆಡಿಎಸ್ ಮುಖಂಡರಾದ ದಿನೇಶ್ ಹೆಗಡೆ, ಚಂದ್ರಶೇಖರ್ ಇತರರಿದ್ದರು.