ಹರಪನಹಳ್ಳಿ: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಪ್ರಾಥಮಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚೆ ಹಾಗೂ ನಿವೃತ್ತ ಶಿಕ್ಷಕ ಬಸವರಾಜ ಸಂಗಪ್ಪಗೆ ಬೀಳ್ಕೊಡಿಗೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆಯಾಗಿದ್ದು, ಶಿಕ್ಷಕರು ಫಲಿತಾಂಶ ಸುಧಾರಣೆಯತ್ತ ಹೆಚ್ಚು ಒತ್ತು ನೀಡಬೇಕು. ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಕುಂದು ಕೊರತೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದರು.
ನಿವೃತ್ತ ಡಿಡಿಪಿಐ ವೀರಣ್ಣ ಜತ್ತಿ ಮಾತನಾಡಿ, ಕರ್ತವ್ಯ ನಿಷ್ಠೆ ಪ್ರಜ್ಞೆ ಶಿಕ್ಷಕರಲ್ಲಿರಬೇಕು. ಅಂದಿನ ಕಾಲದ ಶಿಕ್ಷಕರಲ್ಲಿ ವೃತ್ತಿಯ ಬಗ್ಗೆ ಅಪಾರ ಗೌರವ ಮತ್ತು ಬದ್ಧತೆ ಇತ್ತು. ಆದರೆ ಇಂದು ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.
ನಿವೃತ್ತ ಶಿಕ್ಷಕ ಬಸವರಾಜ ಸಂಗಪ್ಪ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಮತ್ತು ಪ್ರಧಾನ ಕಾರ್ಯದರ್ಶಿ ಎಚ್‌ಎಸ್ ಚೇತನ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ವಿ.ವಿ.ಶಿವರುದ್ರಯ್ಯ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ನುಗ್ಲಿ, ನಿವೃತ್ತ ಡಿಡಿಪಿಐಗಳಾದ ಅಂದಾನಪ್ಪ ಎಂ ವಡಿಗೇರ್, ಸಿ ರಾಮಪ್ಪ, ಬಿಇಒ ಎಚ್.ಲೇಪಾಕ್ಷಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಇದ್ದರು.