ಬಾಗೇಪಲ್ಲಿ : ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೆ, ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದ ಕೈತೊಳೆದುಕೊಂಡಿದ್ದು ಬಿಟ್ಟರೆ ಯಾವುದೇ ರೀತಿಯ ನೆರವು ನೀಡಲಿಲ್ಲ ಎಂದು ಅಂಗನವಾಡಿ ನೌಕರರ ತಾಲೂಕು ಸಂದ ಅಧ್ಯಕ್ಷೆ ಕೆ.ರತ್ನಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಂದ ಪಟ್ಟಣದ ಶಿಶು ಅಭಿವೃದ್ಧಿ ಅಧಿಕಾರಿ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿ, ಕರೊನಾ ಲಾಕ್‌ಡೌನ್ ಸಮಯದಲ್ಲಿ ಕೆಲಸದ ಒತ್ತಡದಿಂದ 35, ಕರೊನಾ ಸೋಂಕಿನಿಂದ 28 ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ, ಆದರೆ ಯಾವುದೇ ರೀತಿಯ ನೆರವು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೇವಾ ಜ್ಯೇಷ್ಠತೆ ಆಧಾರದಲ್ಲಿ 153 ಕೋಟಿ ರೂ., ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ 7 ಕೋಟಿ ರೂ., ಅಂಗನವಾಡಿ ಸಹಾಯಕಿಯರ ಸಂಬಳದ ವ್ಯತ್ಯಾಸ 131 ಕೋಟಿ ರೂ., ಹಾಗೂ ನಿವೃತ್ತಿ ಸೌಲಭ್ಯಕ್ಕೆ 48 ಕೋಟಿ ರೂ., ಸೇರಿ ಒಟ್ಟು 339 ಕೋಟಿ ರೂ. ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಶಿಾರಸು ವಾಡಲಾಗಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಯಾವುದೇ ಅಂಶವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಡಿಪಿಒ ರಾಜೇಂದ್ರ ಪ್ರಸಾದ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಸುಜಾತಮ್ಮ, ರವಾದೇವಿ, ಗಾಯತ್ರಿ, ವಿಮಲಾ, ರತ್ನಮ್ಮ, ಎಂ.ಎಲ್.ಪಾರ್ವತಿ, ಶ್ಯಾಮಲಮ್ಮ, ಅಲವೇಲಮ್ಮ, ಶಾಂತಮ್ಮ, ಸಾವಿತ್ರಮ್ಮ, ಸಿಐಟಿಯು ತಾಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಕಾರ್ಯದರ್ಶಿ ಜಿ.ಮುಸ್ತಫಾ ಮತ್ತಿತರರು ಇದ್ದರು.