ಜಿಲ್ಲೆ

ಸರ್ಕಾರದಿಂದ ತಾತಯ್ಯನ ಜಯಂತಿ ಆಚರಣೆ; ಸಿಎಂ ಬೊಮ್ಮಾಯಿ ಘೋಷಣೆ

ಚಿಕ್ಕಬಳ್ಳಾಪುರ: ಕಾಲಜ್ಞಾನಿ ಕೈವಾರ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವವನ್ನು ಪ್ರತಿ ವರ್ಷ ಸರ್ಕಾರದಿಂದ ಆಚರಿಸುವ ಘೋಷಣೆಯಿಂದ ತಾತಯ್ಯನವರ ಭಕ್ತಾದಿಗಳ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ಬಜೆಟ್‌ನಲ್ಲಿ ಮಾ.27ರಂದು ಕೈವಾರ ತಾತಯ್ಯನವರ ಜಯಂತಿ ಆಚರಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಕನಕದಾಸ, ಬಸವೇಶ್ವರ, ಯೋಗಿ ವೇಮನ, ದೇವರದಾಸಿಮಯ್ಯ ಅಕ್ಕಮಹಾದೇವಿ ಸೇರಿ ಒಬ್ಬೊಬ್ಬರ ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ರಾಜ್ಯ ಸರ್ಕಾರ ಪ್ರಕಟಿಸುತ್ತಿದ್ದ ಸಂದರ್ಭದಲ್ಲಿ ಕೈವಾರ ತಾತಯ್ಯನವರ ಹೆಸರು ಪ್ರಸ್ತಾಪವಾಗುತ್ತಿತ್ತು.

ಬಲಜಿಗಉದ್ಯೋಗ ಮೀಸಲಾತಿಯಲ್ಲಿ ಜನಾಂಗವನ್ನು 2ಎನಿಂದ 3ಎಗೆ ಹಾಕಿರುವುದರಿಂದ ಸಮುದಾಯ ನಾನಾ ಸಮಸ್ಯೆ ಅನುಭವಿಸುತ್ತಿದ್ದು, ಇದಕ್ಕೆ ಮತ್ತೆ ಹಳೇ ಮೀಸಲಾತಿಯಲ್ಲಿಯೇ ಗುರುತಿಸಬೇಕು. ಕೈವಾರ ತಾತಯ್ಯ ಜಯಂತ್ಯುತ್ಸವವನ್ನು ಸರ್ಕಾರದಿಂದ ಆಚರಣೆ, ಸಮುದಾಯದ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯಿಸಿ ಬಲಿಜ ಜನಾಂಗದವರು ಬೃಹತ್ ಹೋರಾಟ ನಡೆಸಿ ಗಮನ ಸೆಳೆದಿದ್ದರು.

ಜನಪ್ರತಿನಿಧಿಗಳ ಮೂಲಕ ನಿರಂತರವಾಗಿ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿದಾಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜನಾಂಗವನ್ನು ಶೈಕ್ಷಣಿಕ ಅರ್ಹತೆಗೆ ಪರಿಗಣನೆಯ ಸಂದರ್ಭದಲ್ಲಿ 2ಎ ಗುರುತಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸುವ ಮೂಲಕ ತೃಪ್ತಿಪಡಿಸಿದ್ದರು. ಮತ್ತೊಂದೆಡೆ ಉಳಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗಮನ ಸೆಳೆದಿದ್ದು, ಅಂತೂ ಇಂತು ವಿಳಂಬವಾಗಿಯಾದರೂ ಕೈವಾರ ತಾತಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಘೋಷಣೆ ಹೊರ ಬಿದ್ದಿದೆ. ಇದಕ್ಕೆ ವ್ಯಾಪಕ ಸಂತಸ ವ್ಯಕ್ತವಾಗಿದೆ.

ಕಾಲಜ್ಞಾನಿ ಕೈವಾರ ತಾತಯ್ಯ: ಪೋತಲೂರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಗಳ ಮಾದರಿಯಲ್ಲಿ ಕೈವಾರ ತಾತಯ್ಯ ಸಹ ತಪೋಶಕ್ತಿಯಿಂದ ಭವಿಷ್ಯದ ಹಲವು ವಿದ್ಯಮಾನಗಳ ಬಗ್ಗೆ ಕಾಲಜ್ಞಾನದಲ್ಲಿ ಹೇಳಿದ್ದಾರೆ. ಈಗಾಗಲೇ ಹಲವು ಋಜುವಾಗಿದೆ. ಮಹಾಭಾರತದಲ್ಲಿನ ಭೀಮ ಮತ್ತು ಬಕಾಸುರನ ಮಧ್ಯೆ ನಡೆದ ಕಾಳಗಕ್ಕೆ ಸಾಕ್ಷಿಯಾಗಿರುವ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರವು ತಾತಯ್ಯನವರ ಜನ್ಮಸ್ಥಳ. ಕೊಂಡಪ್ಪ ಮತ್ತು ಮುದ್ದಮ್ಮ ದಂಪತಿಯ ಪುತ್ರ ನಾರಾಯಣಪ್ಪ. ಸಂಸಾರದ ಜಂಜಾಟವನ್ನು ಬದಿಗೊತ್ತಿ ಗುರುವಿನ ಮಾರ್ಗದರ್ಶನದಂತೆ ನರಸಿಂಹಗುಹೆಯಲ್ಲಿ ತಪ್ಪಸ್ಸನ್ನಾಚರಿಸಿ ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರರಾದರು.

ಕೈವಾರದ ಆರಾಧ್ಯ ದೈವ ಶ್ರೀ ಅಮರನಾರೇಯಣಸ್ವಾಮಿ ಅವರ ಪರಮಭಕ್ತರಾಗಿ, ತೆಲುಗು, ಕನ್ನಡ ಭಾಷೆಗಳಲ್ಲಿ ಅದ್ವೀತಿಯವಾದ ಅಧ್ಯಾತ್ಮ ಚಿಂತನೆಗಳನ್ನೊಳಗೊಂಡ ಕೀರ್ತನೆ, ಕಾಲಜ್ಞಾನ, ತತ್ತ್ವಪದಗಳು, ವೇದಾಂತ ಸಾರಾವಳಿಗಳನ್ನು ಸರಳ ಭಾಷೆಯಲ್ಲಿ ರಚಿಸಿದ್ದು ಭಕ್ತರ ಅಭ್ಯುದಯಕ್ಕಾಗಿ ಜೀವಿತವನ್ನೇ ಮುಡುಪಾಗಿಟ್ಟಿದ್ದರು. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡು ಸೇರಿ ವಿವಿಧ ಭಾಗಗಳಿಗೆ ಸಂಚರಿಸಿ ಅನೇಕ ಜನರಿಗೆ ಮಾರ್ಗದರ್ಶನ ನೀಡಿದರು.

110 ವರ್ಷ ಜೀವನ ನಡೆಸಿ, ಕೈವಾರದ ತಪೋ ಭೂಮಿಯಲ್ಲಿ ಜೀವ ಸಮಾಧಿಯಾದರು. ಇಂದಿಗೂ ಯೋಗೀ ನಾರೇಯಣ ಮಠದಲ್ಲಿ ತಾತಯ್ಯನವರ ಹೆಸರಿನಲ್ಲಿ ಗುರುಪೂಜಾ, ಸಂಗೀತೋತ್ಸವ ಸೇರಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಕೈವಾರ ಕ್ಷೇತ್ರವು ನಿರಂತರ ಸಾಧು ಸಂತರ ಸಮಾಗಮದಿಂದ ಜಿಲ್ಲೆಯ ಕಾಶಿಯಾಗಿ ಪರಿವರ್ತನೆಯಾಗಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಯೋಗಿ ನಾರೇಯಣ ಯತೀಂದ್ರರು ಯೋಗ ಸಮಾಧಿಯಲ್ಲಿ ವಿರಾಜಮಾನರಾಗಿ ಎಲ್ಲ ಸಮುದಾಯವನ್ನು ಆಶೀರ್ವದಿಸುತ್ತಿದ್ದಾರೆ. ಇವರ ಜಯಂತಿಯನ್ನು ಪ್ರತಿವರ್ಷ ಮಾ.27ರಂದು ಆಚರಿಸಲು ಘೋಷಣೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಎಲ್ಲ ಭಕ್ತರ ಪರವಾಗಿ ಧನ್ಯವಾದಗಳು. ಎಂ.ಆರ್.ಜಯರಾಂ, ಧರ್ಮಾಧಿಕಾರಿಗಳು, ಕೈವಾರ ಯೋಗೀನಾರೇಯಣ ಮಠ