ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದ ಎಲ್ಲ ನಿವಾಸಿಗಳಿಗೆ ಆರೋಗ್ಯ ರಕ್ಷಣೆಗೆ ಸರ್ಕಾರ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಜಾರಿಗೆ ತಂದಿದೆ. ಅದರಂತೆ ಡಾ. ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ ಸಾಮಾನ್ಯ ಸೇವಾ ಕೇಂದ್ರ ಆರಂಭಿಸಿದ್ದಾರೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್‌ನ ನೂತನ ಆಡಳಿತ ಮಂಡಳಿ ಸುವರ್ಣ ಮಹೋತ್ಸವ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಜನ್ಮದಿನ ನಿಮಿತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೇವಾ ಕೇಂದ್ರಗಳ ಮೂಲಕ ಜನರಿಗೆ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿದ್ದಾರೆ. ಅದರಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಕಾರ್ಡ್ ಆರೋಗ್ಯ ಯೋಜನೆ ಸಹ ಒಂದು. ಎಲ್ಲರೂ ಹೆಸರು ನೋಂದಾಯಿಸಿಕೊಂಡು ಕೇಂದ್ರ ಸರ್ಕಾರದ ಸೌಲಭ್ಯ ಪಡೆದು ಆರೋಗ್ಯ ರಕ್ಷಣೆಗೆ ಭದ್ರತೆ ಮಾಡಿಕೊಳ್ಳಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಕೇಂದ್ರ ಸರ್ಕಾರದ 800ಕ್ಕೂ ಹೆಚ್ಚು ಯೋಜನೆಗಳಲ್ಲಿ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಆತ್ಮಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ಸಶಕ್ತವಾಗಿ ಮೈಗೂಡಿಸಿಕೊಂಡು ತಮ್ಮ ಗುರಿ ಸಾಧಿಸಿಕೊಳ್ಳಬೇಕು ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್‌ಸಿ ವಿಭಾಗದ ನಿರ್ದೇಶಕ ಎಚ್.ಆರ್. ಲವಕುಮಾರ ಆಯುಷ್ಮಾನ್ ಆರೋಗ್ಯ ಕಾರ್ಡ್ ಕುರಿತು ಮಾಹಿತಿ ನೀಡಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಡಾ. ವೈ.ಎಸ್. ರಾಯಬಾಗಿ, ಡಾ. ಎಸ್. ಕೆ. ನಡುವಿನಕೇರಿ, ಮಹಾವೀರ ಉಪಾಧ್ಯೆ ಇತರರು ಇದ್ದರು.