ಕೆ.ಆರ್.ನಗರ: ಕಟ್ಟಡ ಕಾರ್ಮಿಕರು ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಂಡು ಅಭಿವೃದ್ಧಿ ಹೊಂದುವಂತೆ ಶಾಸಕ ಸಾ.ರಾ.ಮಹೇಶ್ ಸಲಹೆ ನೀಡಿದರು.
ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆ.ಆರ್.ನಗರ ತಾಲೂಕಿನ 500 ಮಂದಿ ನೋಂದಾಯಿತ ಕಾರ್ಮಿಕರಿಗೆ ಕಿಟ್ ವಿತರಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ. ನೋಂದಾಯಿಸಿಕೊಳ್ಳದೆ ಇರುವ ಕಾರ್ಮಿಕರು ಕೂಡಲೇ ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಮಿಕ ನಿರೀಕ್ಷಕ ಎಚ್.ಪಿ.ಜಯಣ್ಣ ಮಾತನಾಡಿ, ತಾಲೂಕಿನಲ್ಲಿ 12 ಸಾವಿರ ನೋಂದಾಯಿತ ಕಾರ್ಮಿಕರಿದ್ದು, ಉಳಿದವರು ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಮಕ್ಕಳ ಮದುವೆ, ವಿದ್ಯಾಭ್ಯಾಸ, ವಿಮೆ, ಅಪಘಾತ, ಗಾಯಗೊಂಡ ಸಂದರ್ಭದಲ್ಲಿ ನೆರವು ಸೇರಿದಂತೆ ಅನೇಕ ಸೌಲಭ್ಯಗಳನ್ನು ನೋಂದಾಯಿತ ಕಾರ್ಮಿಕರಿಗೆ ಇಲಾಖೆ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಮಿಕರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು. ಇಲಾಖೆ ವತಿಯಿಂದ ನಿಮಗೆ ನೀಡುತ್ತಿರುವ ಟೂಲ್ಸ್ ಕಿಟ್‌ಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಹಸೀಲ್ದಾರ್ ಎಂ.ಎಸ್.ಯಧುಗಿರೀಶ್, ತಾಪಂ ಇಒ ಎಚ್.ಕೆ.ಸತೀಶ್, ಕಾರ್ಮಿಕ ಅಧಿಕಾರಿ ರಾಜೇಶ್ ಜಾಧವ್, ಇಲಾಖೆ ಸಿಬ್ಬಂದಿ ಚಂದ್ರಕಾಂತ್, ಶ್ರೀ ವೀರಭದ್ರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಟರಾಜ್ ಇತರರು ಇದ್ದರು.