ಮೂಡಿಗೆರೆಯಲ್ಲಿ ಕುಂಬಾರ ಯಾನೆ ಕುಲಾಲ ಸಂಘದ ವಾರ್ಷಿಕೋತ್ಸವದಲ್ಲಿ ಎಸ್‌ಎಸ್‌ಎಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಆರ್.ಡಿ.ರವೀಂದ್ರ, ಧರ್ಮೇಶ್, ಚಿದಾನಂದ ಗುರೂಜಿ, ಗಂಗಾಧರ್, ಕೆ.ಟಿ.ಹರೀಶ್ ಇತರರಿದ್ದರು. 
ಜಿಲ್ಲೆ

ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತ ಹೋರಾಟ ಅಗತ್ಯ

ಮೂಡಿಗೆರೆ: ಕುಂಬಾರ ಯಾನೆ ಕುಲಾಲ ಸಮುದಾಯ ಬಾಂಧವರು ಬಲಿಷ್ಠವಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದು ಚಿತ್ರದುರ್ಗದ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಹೇಳಿದರು.

ಬುಧವಾರ ನಡೆದ ಕುಂಬಾರ ಯಾನೆ ಕುಲಾಲ ಸಂಘದ 2ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಕುಂಬಾರ ಸಮುದಾಯದ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕಲು ಸಮುದಾಯ ಬಾಂಧವರು ಸಂಘಟಿತರಾಗಬೇಕು. ಸಮುದಾಯದೊಳಗೆ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಸಂಘಟಿತರಾಗುವ ಸಮಯ ಈಗ ಒದಗಿ ಬಂದಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕು. ಅದಕ್ಕಾಗಿ ಬೇಕಾದ ಜಾಗ ಗುರುತಿಸಿ ಆಯಾ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಜಾಗ ಪಡೆದುಕೊಳ್ಳಬೇಕು. ಸಮುದಾಯದ ಮಕ್ಕಳು ವೃತ್ತಿಪರವಾದ ಉನ್ನತ ಶಿಕ್ಷಣ ಪಡೆದು ಉನ್ನತ ಮಟ್ಟದ ಸರ್ಕಾರಿ ಹುದ್ದೆ ಅಲಂಕರಿಸಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ನೀಡುವ ಮೂಲಕ ಸನ್ಮಾನಿಸಲಾಯಿತು.

ತೋಳೂರು ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಧರ್ಮೇಶ್, ಹಡ್ಲುಗದ್ದೆ ವನದುರ್ಗ ಪರಮೇಶ್ವರಿ ಅಮ್ಮನವರ ಕ್ಷೇತ್ರದ ಚಿದಾನಂದ ಗುರೂಜಿ, ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್, ಕುಂಬಾರ ಯಾನೆ ಕುಲಾಲ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ಹರೀಶ್, ಮುಖಂಡರಾದ ನಾಗರಾಜ್, ಸುರೇಶ್, ಮಂಜುನಾಥ್, ಚಂದ್ರಶೇಖರ್, ಶಿವಮೂರ್ತಿ, ಮಂಜಪ್ಪ ಶೆಟ್ಟಿ, ಸೋಮಶೇಖರ್, ಬಾಬು ಕಳಸ, ಚಂದ್ರಶೇಖರ್, ಸುಜಯ್ ಇತರರಿದ್ದರು.