ಶಹಾಬಾದ್: ಮಾದಿಗ ಸಮಾಜ ಸಂವಿಧಾನ ಬದ್ಧವಾದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಆರ್ಥಿಕ, ಶೈಕ್ಷಣಿಕವಾಗಿ ಸದೃಢವಾಗಬೇಕು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಮಡು ಕರೆ ನೀಡಿದರು.
ಇಂಡಿಯಾ ಸಭಾಗೃಹದಲ್ಲಿ ಮಾದಿಗ ಸಮಾಜದ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಿಗ ಸಮಾಜದವರು ಇರುವ ಬಡಾವಣೆಗಳಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿದ್ದು, ಅಧಿವೇಶನದ ಬಳಿಕ ಕಾಲನಿಗಳಿಗೆ ಭೇಟಿ ನೀಡಿ ಪರಿಹಾರ ಕಲ್ಪಿಸಲು ಶ್ರಮಿಸುವೆ. ನಗರದಲ್ಲಿ ಮಾದಾರ ಚನ್ನಯ್ಯ ಮೂರ್ತಿ ಸ್ಥಾಪನೆಗೆ ಪ್ರಾಮಾಣಿಕ ಪಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಮುಖಂಡ ಭೀಮಣ್ಣ ಬಿಲ್ಲವ ಮಾತನಾಡಿ, ಒಗ್ಗಟ್ಟಿನ ಕೊರತೆಯಿಂದ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ಸಮಾಜದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದು, ಶಾಸಕ ಬಸವರಾಜ ಮತ್ತಿಮಡು ಅವರು ನಾಯಕತ್ವ ವಹಿಸಿಕೊಂಡು ಮಾದಿಗ ಸಮಾಜವನ್ನು ಮುನ್ನಡೆಸಬೇಕು ಎಂದು ಮನವಿ ಮಾಡಿದರು.
ವಾಡಿ ಶಹಾಬಾದ್ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕನಕಪ್ಪ ದಂಡಗುಲಕರ, ಕಮಲಾಪುರದ ಗುಂಡಪ್ಪ ಸಿರಡೋಣ, ಭೀಮರಾಯ ಮುದ್ನಾಳ ಮಾತನಾಡಿದರು.
ಸಾಧಕರಾದ ಡಾ.ಚಿದಾನಂದ ಮುದ್ನಾಳ, ಡಾ.ಸುರೇಶ ಬೆಳಗುಂದಿ, ಡಾ.ರಾಜಶೇಖರ ಭಾವಿಮನಿ, ಪೃಥ್ವಿ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯೆ ಪೀರಮ್ಮ ಪಗಲಾಪುರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಮಹ್ಮದ್ ಖದೀರ್, ಉದ್ಯಮಿ ಅಣವೀರ ಇಂಗಿನಶೆಟ್ಟಿ, ಪ್ರಮುಖರಾದ ನಿಂಗಪ್ಪ ಹುಳಗೋಳ, ನಾಗೇಂದ್ರ ದಂಡೋತಿ, ಚಂದ್ರಕಾಂತ ಗೊಬ್ಬುರಕರ, ಮರೆಪ್ಪ ದೊಡ್ಡಮನಿ, ಯಲ್ಲಾಲಿಂಗ ಹಯ್ಯಾಳಕರ ವಂದಿಸಿದರು. ಕಾರ್ಯಕ್ರಮದಲ್ಲಿ ಅನೀಲ ಮೈನಾಳಕರ್, ಪುನೀತ ಹಳ್ಳಿ, ರವಿ, ಅಮರ ಕೋರೆ, ಶರಣು ಪಗಲಾಪುರ, ಸಂತೋಷ ಹುಲಿ,ಮೋಹನ ಹಳ್ಳಿ, ನವೀನ ಸಿಪ್ಪಿ ಇತರರಿದ್ದರು.
ನಾಗರಾಜ ನಿರೂಪಣೆ ಮಾಡಿದರು. ಮನೋಹರ ಮೇತ್ರಿ ಸ್ವಾಗತಿಸಿದರು. ಮರಲಿಂಗ ಯಾದಗಿರಿ ನಿರೂಪಣೆ ಮಾಡಿದರು.