ಕಂಪ್ಲಿ: ಪರಿಶಿಷ್ಟರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕೌಶಲ ಗಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಧರ್ಮಸೇನ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಎಸ್ಸಿ ಸಮುದಾಯದವರ ಕುಂದುಕೊರತೆ ಸಭೆ ನಡೆಸಿ ಬುಧವಾರ ಮಾತನಾಡಿದರು. ಎಸ್ಸಿ ಸಮುದಾಯದವರ ಶಿಕ್ಷಣಕ್ಕಾಗಿ ಕಾಂಗ್ರೆಸ್ ಹೆಚ್ಚಿನ ನಿಗಾ ವಹಿಸಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷನಿಷ್ಠ ಹಾಗೂ ಕ್ರಿಯಾಶೀಲ ಆಗಿರುವವರಿಗೆ ಟಿಕೆಟ್ ನೀಡಲಾಗುವುದು. ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಪಕ್ಷ ಸಂಘಟಿಸುವಲ್ಲಿ ಮುಂದಾಗುವಂತೆ ಸಲಹೆ ನೀಡಿದರು.
ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ವೀರಾಂಜನೇಯಲು ಮಾತನಾಡಿ, ಚುನಾವಣೆ ಬಂದಾಗ ಎಸ್ಸಿ ಸಮುದಾಯದವರ ಮೇಲೆ ಕಂಡುಬರುವ ಒಲವು ಅಧಿಕಾರ ಸಿಕ್ಕಮೇಲೆ ಇರಲ್ಲ ಎನ್ನುವ ಆರೋಪವಿದೆ. ಎಸ್ಸಿ ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಯೋಜನೆ ರೂಪಿಸುವಂತೆ ತಿಳಿಸಿದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಗುತ್ತಿಗೆ ಆಧಾರಿತ ಹುದ್ದೆಗಳನ್ನು ಎಸ್ಸಿ ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರಿಗೆ ದೊರಕಿಸಿಕೊಡುವಲ್ಲಿ ಸರ್ಕಾರ ಮುಂದಾಗಬೇಕು. ಪಕ್ಷದ ಬಲವರ್ಧನೆಯಲ್ಲಿ ಎಸ್ಸಿಗಳ ಪಾತ್ರ ಮಹತ್ವದ್ದಿದೆ ಎಂದರು.
ಪಕ್ಷ, ನಿಗಮ ಮೊದಲಾದವುಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಜಿಲ್ಲೆಯ ಎಸ್ಸಿ ಸಮುದಾಯದವರಿಗೆ ನೀಡಬೇಕು. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಲಾಯಿತು. ಕೆಪಿಸಿಸಿ ಉಪಾಧ್ಯಕ್ಷ ಖದಿರಾಮ ರಾಥೋಡ್, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಆರ್.ಎಂ.ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಹಬೀಬ್ ರೆಹಮಾನ್, ಲಡ್ಡು ಹೊನ್ನೂರವಲಿ, ಸೈಯದ್ ಉಸ್ಮಾನ್, ಎಚ್.ಜಗದೀಶ, ಎಚ್.ಜಡೆಪ್ಪ, ಮಲಿಯಪ್ಪ, ಶ್ರೀಗುರು, ನಾಗರಾಜ ನಾಯಕ ಇದ್ದರು.