ಬಸವಕಲ್ಯಾಣ: ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ 3ರಿಂದ ಪಕ್ಷದ ಹಲವು ಮುಖಂಡರು ಆಗಮಿಸುವರು. ನಾನು ಶುಕ್ರವಾರದಿಂದ ಕಲ್ಯಾಣದಲ್ಲೇ ಮೊಕ್ಕಾಂ ಹೂಡಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕ್ಷೇತ್ರದ ಚುನಾವಣಾ ಉಸ್ತುವಾರಿ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮಾಡುತ್ತಿರುವ ಜನಪರ ಕೆಲಸ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಕ್ಷೇತ್ರದ ಸ್ಥಿತಿಗತಿ ನೋಡಿದರೆ ನಮ್ಮ ಅಭ್ಯರ್ಥಿ ಶರಣು ಸಲಗರ್ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಬಸವಕಲ್ಯಾಣ ಮಾದರಿ ಕ್ಷೇತ್ರವಾಗಬೇಕು ಎಂಬುದೇ ನಮ್ಮ ಧ್ಯೇಯ. ಸರ್ಕಾರ ಸಹ ಇಲ್ಲಿನ ವಿಕಾಸಕ್ಕೆ ಆದ್ಯತೆ ನೀಡುತ್ತಿದೆ. ಕಲ್ಯಾಣವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣ ಮಾಡುವುದಾಗಿ ಈ ಹಿಂದೆ ಅನುಭವ ಮಂಟಪ ಶಂಕುಸ್ಥಾಪನೆ ಸಮಾರಂಭದಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಅವರು ನುಡಿದಂತೆ ನಡೆಯುತ್ತಾರೆ. ಕಲ್ಯಾಣ ಅಭಿವೃದ್ಧಿಯಲ್ಲಿ ಈ ಚುನಾವಣೆ ಮಹತ್ತರ ಪಾತ್ರ ವಹಿಸಲಿದೆ. ಜನತೆ ಅಭಿವೃದ್ಧಿಗಾಗಿ ಬಿಜೆಪಿ ಸಾಥ್ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿ ಭಿನ್ನಮತ, ಗುಂಪುಗಾರಿಕೆ ಇಲ್ಲ. ಟಿಕೆಟ್ ಹಂಚಿಕೆ ನಂತರ ಕೆಲವರು ಅತೃಪ್ತರಾಗುವುದು ಸಹಜ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿದು ಕಲ್ಯಾಣದಲ್ಲಿ ಮತ್ತೊಮ್ಮೆ ಕಮಲ ಅರಳಿಸುತ್ತೇವೆ. ಕೆಲ ಅತೃಪ್ತರು ಸಹ ತೃಪ್ತರಾಗಿ ಶೀಘ್ರದಲ್ಲೇ ಪ್ರಚಾರಕ್ಕೆ ಬರುವಂತೆ ವರಿಷ್ಠರು ಮಾಡಲಿದ್ದಾರೆ ಎಂದರು.