ಜಿಲ್ಲೆ

ಸರ್ಕಾರದ ಸವಲತ್ತುಗಳನ್ನು ಸದುಪಯೋಗಿಸಿಕೊಳ್ಳಿ

ಬೇಲೂರು: ಸರ್ಕಾರದ ವಿವಿಧ ಯೋಜನೆಗಳಡಿ ಸಿಗುವ ಸವಲತ್ತುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಬೇಲೂರು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಸಲಹೆ ನೀಡಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಅಂಗವಿಕಲ ಫಲಾನುಭವಿಗಳಿಗೆ ಮೂರು ಚಕ್ರದ ಬೈಸಿಕಲ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ಅಂಗವಿಕಲರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂಗವಿಕಲರು ಯಾರನ್ನೂ ಅವಲಂಬಿಸದೆ ಸ್ವಾವಲಂಬಿಗಳಾಗಿ ಎಲ್ಲರಂತೆ ಸಮಾಜದಲ್ಲಿ ಬದುಕಬೇಕೆಂದು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಆದ್ದರಿಂದ ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಮಾತನಾಡಿ, ಪುರಸಭೆಯ ಯೋಜನೆಯಡಿ ಅಂಗವಿಕಲ ಫಲಾನುಭವಿಗಳಿಗೆ ಮೂರು ಚಕ್ರದ ಬೈಸಿಕಲ್ ವಿತರಿಸುತ್ತಿದ್ದೇವೆ. ಇನ್ನು ಅನೇಕ ಸವಲತ್ತುಗಳನ್ನು ಫಲಾನುಭವಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರು.

ಪುರಸಭೆ ಸದಸ್ಯರಾದ ಅಶೋಕ್, ಜಮಾಲೂದ್ದೀನ್, ಬಿ.ಗಿರೀಶ್, ಜಗದೀಶ್, ರತ್ನಾ ಸತ್ಯನಾರಾಯಣ್, ಮಣಿ, ಅಶೋಕ್, ಫಯಾಜ್ ಅಹಮದ್, ಪುಟ್ಟಸ್ವಾಮಿ, ನಾಮಿನಿ ಸದಸ್ಯ ರವಿ, ಜಗದೀಶ್ ಇದ್ದರು.