ಹನೂರು: ಪೋಡುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಿ ಸಂಘಟಿತರಾಗಬೇಕಿದೆ ಎಂದು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಸಿದ್ದ ಸಲಹೆ ನೀಡಿದರು.
ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಲ್ ಸೋಲಿಗ ಮುಖಂಡರ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಗಿರಿಜನರ ಹಾಡಿಗಳಿದ್ದು, ಇದರಲ್ಲಿ ಬಹುತೇಕ ಪೋಡುಗಳಲ್ಲಿ ಸಮರ್ಪಕ ರಸ್ತೆ, ಕುಡಿಯುವ ನೀರು, ವಿದ್ಯುತ್, ಸ್ಮಶಾನ ಸೇರಿದಂತೆ ಇನ್ನು ಅನೇಕ ಮೂಲ ಸೌಕರ್ಯಗಳ ಕೊರತೆ ಇದೆ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು, ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸಮರ್ಪಕ ಮೂಲಸೌಕರ್ಯ ಒದಗಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಗಿರಿಜನರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸರಿಯಾಗಿ ದೊರಕುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನಕ್ಕುಂದಿ ಸೋಲಿಗ ಸರ್ಕಲ್ ಅಧ್ಯಕ್ಷರಾಗಿ ಜಲ್ಲಿಪಾಳ್ಯ ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಸಂಯೋಜಕರಾದ ಮಹದೇವಸ್ವಾಮಿ, ಜಡಿಯಪ್ಪ ಹಾಗೂ ವಿವಿಧ ಹಾಡಿಗಳ ಮಹಿಳೆಯರು, ಮುಖಂಡರು ಇದ್ದರು.