ಜಿಲ್ಲೆ

ಅ.23ಕ್ಕೆ ರೈತರ ಪ್ರತಿಭಟನೆ

ಮೈಸೂರು: ರಾಜ್ಯದ ಅತಿವೃಷ್ಟಿ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷೃ ಧೋರಣೆ ತಾಳಿದ್ದು, ಇದನ್ನು ಖಂಡಿಸಿ ಅ.23ರಂದು ಬೆಳಗ್ಗೆ 11ಕ್ಕೆ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ರಾಜ್ಯ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕವು ಸತತ ಆರು ವರ್ಷಗಳ ಕಾಲ ಬರ ಎದುರಿಸಿದೆ. ಬಳಿಕ ನಿರಂತರವಾಗಿ 3 ವರ್ಷದಿಂದ ಪ್ರವಾಹ ತಲೆದೂರಿದ್ದು, ಫಸಲು, ಆಸ್ತಿ, ಮನೆಯನ್ನು ಅಲ್ಲಿನ ರೈತರು, ಜನರು ಕಳೆದುಕೊಂಡಿದ್ದಾರೆ. ಇಷ್ಟಾದ್ದರೂ ಉಭಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಿ ಖಂಡನಾ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸತತ 3 ವರ್ಷಗಳಿಂದ ರಾಜ್ಯದ ನಾನಾ ಭಾಗಗಳು ನೆರೆಗೆ ಒಳಗಾಗುತ್ತಿವೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ಭಿಕ್ಷಾ ರೂಪದ ಪರಿಹಾರದ ಮಾನದಂಡವನ್ನು ಹೊಂದಿರುವ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ನು ಬದಲಿಸಬೇಕು. ಫಸಲು ನಷ್ಟ ಹೊಂದಿದ ರೈತರಿಗೆ ಸಂಪೂರ್ಣ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ತುಂಬಿಕೊಡಬೇಕು. ಮನೆ ಕಳೆದುಕೊಂಡವರಿಗೆ ಪುನಃ ಮನೆ ನಿರ್ಮಾಣ ಮಾಡಿಕೊಡಬೇಕು. ಹದಗೆಟ್ಟ ಕೃಷಿ ಭೂಮಿಯನ್ನು ವ್ಯವಸಾಯಕ್ಕೆ ಯೋಗ್ಯವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.
ನೆರೆ ಪೀಡಿತ ಭಾಗದ ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಹೊಸದಾಗಿ ಬಡ್ಡಿ ರಹಿತ ಸಾಲ ನೀಡಬೇಕು. ರೈತರ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿಯನ್ನು ಕೂಡಲೇ ಪಾವತಿ ಮಾಡಬೇಕು. ಬೆಳೆ ವಿಮೆ ಪರಿಹಾರ, ಇನ್‌ಪುಟ್ ಸಬ್ಸಿಡಿ ಇವುಗಳನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ತಾನೇ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳಲು ದುಡ್ಡಿಲ್ಲವಂತೆ. ಇದನ್ನೇ ರಾಜ್ಯ ಸರ್ಕಾರವೂ ಕೂಡ ಕೇಳುತ್ತಿದೆ. ಆದರೆ, ಐಷಾರಾಮಿ ವಿಮಾನ ಕೊಳ್ಳಲು ಮೋದಿಯವರ ಖಜಾನೆಯಲ್ಲಿ ಹಣವಿದೆ. ಈ ಕಾರಣಕ್ಕೆ ಕೃಷಿ ಉತ್ಪನ್ನಗಳನ್ನು ಕೊಡಲು ಆವರ್ತನಿಧಿಗಾಗಿ ರೈತರೇ ಪ್ರಧಾನಿ ಮಂತ್ರಿ ಖಾತೆಗೆ ಹಣ ಜಮಾ ಮಾಡುವ ಅಭಿಯಾನಕ್ಕೆ ಅ.23ರಂದು ರಾಜ್ಯಾದ್ಯಂತ ಕೈಗೊಳ್ಳಲಾಗುವುದು ಎಂದು ತಿಳಿಸಿದರು.