ಜಿಲ್ಲೆ

ಸರ್ಕಾರದ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕ

ಎಚ್.ಡಿ.ಕೋಟೆ: ರಾಮರಾಜ್ಯದ ಕನಸು ಕಂಡಿದ್ದ ಗಾಂಧೀಜಿ ಅವರ ಕನಸನ್ನು ನನಸು ಮಾಡಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ.ಆರ್.ಎಚ್.ಪವಿತ್ರಾ ತಿಳಿಸಿದರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಬ್ಬ ಮಹಿಳೆ ನಿರ್ಭೀತಿಯಿಂದ ಓಡಾಡಲು ಇಂದಿಗೂ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಶೇ.86 ಪುರುಷರು ಮತ್ತು ಶೇ.68 ಮಹಿಳೆಯರು ವಿದ್ಯಾವಂತರಿದ್ದಾರೆ. ಇಂತಹ ತಾರತಮ್ಯದ ವಿರುದ್ಧ ಹೋರಾಡಿ ಆ ಮಹಿಳೆಯರಿಗೂ ಕ್ಷಣದ ಅವಶ್ಯಕತೆ ಪೂರೈಸಬೇಕು. ಪ್ರಸ್ತುತ ಸರ್ಕಾರದಲ್ಲಿರುವ ಹಲವು ಯೋಜನೆಗಳು ಮತ್ತು ಕಾನೂನುಗಳು ಮಹಿಳೆಯರ ಸಬಲೀಕರಣಕ್ಕೆ ಮತ್ತು ಸಮಾನತೆಗೆ ಪೂರಕವಾಗಿವೆ ಎಂದು ತಿಳಿಸಿದರು.

ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ.ರೇಷ್ಮಾ ಚಂಗಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆ ಕೆಲಸಕ್ಕೆ ತೆರಳುತ್ತಿರುವ ಸ್ಥಳಗಳಿಲ್ಲಿ ದೌರ್ಜನ್ಯ ನಡೆಯುತ್ತಿವೆ. ಕೆಲವು ಪ್ರಕರಣಗಳು ಬೆಳಕಿಗೆ ಬಂದರೆ, ಮತ್ತೆ ಕೆಲವು ಪ್ರಕರಣಗಳು ಬೆಳಕಿಗೆ ಬಾರದ ಸ್ಥಿತಿ ಎದುರಾಗಿದೆ ಎಂದರು.

ಭೈರಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಎಂ.ನೇತ್ರಾವತಿ ಮಾತನಾಡಿ, ಸದೃಢ ಸಮಾಜ ಕಟ್ಟಬೇಕಾದರೆ ಲಿಂಗ ತಾರತಮ್ಯ ಮರೆತು ಶ್ರಮಿಸಬೇಕು ಎಂದರು.

105ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಹೆಬ್ಬಲಗುಪ್ಪೆ ಗ್ರಾಮದ ನಗ್ಮಾ, ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಎನ್‌ಸಿಸಿ ವಿದ್ಯಾರ್ಥಿನಿ ಪ್ರಿಯಾಂಕಾ, ವಿಶ್ವವಿದ್ಯಾಲಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಚಂದನಾ, ಎನ್‌ಎಸ್‌ಎಸ್ ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದ ಚೈತ್ರಾ, ವಲಯ ಮಟ್ಟದ ಪಥಸಂಚಲನದಲ್ಲಿ ಭಾಗಿಯಾದ್ದ ಶರಣ್ಯ, ಜೀವನ್ ಅವರನ್ನು ಅಭಿನಂದಿಸಲಾಯಿತು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಎನ್.ವೆಂಕಟೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭೈರೇಗೌಡ, ಉಪನ್ಯಾಸಕರಾದ ಅವೀನಾ, ಡಿ.ಚಂದನಾ, ಸಿ.ಚಿತ್ರಾ, ಬಿ.ಚಿಕ್ಕದೇವಿ, ಸಂಗೀತಾ ಗೌಡ, ಶಾಂಭವಿ, ಮುಖಂಡ ಭಾಸ್ಕರ್, ಪತ್ರಕರ್ತರ ಸಂಘದ ಅಧ್ಯಕ್ಷ ಕಬಿನಿ ಮಂಜು, ಕುಮಾರ್, ಕಲ್ಲೇಶ್ ಗೌಡ, ಚನ್ನಕೇಶವ, ರಾಮಚಂದ್ರ, ಅಂಕಪ್ಪ, ಕ್ರೀಡಾ ಕಾರ್ಯದರ್ಶಿ ಬಿ.ಸಿ.ಮಹೇಂದ್ರ, ಸಿದ್ದೇಗೌಡ, ಮಂಜು, ಮಹದೇವು, ಸಿದ್ದರಾಜು, ಪ್ರಕಾಶ್ ಇದ್ದರು.