ಚಾಮರಾಜನಗರ: ರಾಜ್ಯವು ಇಂದು ಇಡೀ ದೇಶದ ಗಮನ ಸೆಳೆಯುತ್ತಿದೆ. ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಕಾಣುತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಸೌಕರ್ಯ ಒದಗಿಸುವತ್ತ ದಾಪುಗಾಲಿಡುತ್ತಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ 77ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆಗಳ ಮೂಲಕ ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಅಭಿವೃದ್ಧಿಗೆ ಬೇಕಿರುವ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಿದ್ದು, ಇಡೀ ರಾಜ್ಯ ದೇಶಕ್ಕೆ ಮಾದರಿ ಆಗುತ್ತಿದೆ ಎಂದರು.
ಉಪನ್ಯಾಸಕಿ ಶ್ವೇತಾ ಮಾತನಾಡಿ, ದೇಶದ ಸ್ವಾತಂತ್ರೃ ಸಂಗ್ರಾಮ, ಐತಿಹ್ಯ, ತ್ಯಾಗ, ಬಲಿದಾನ, ದೇಶದ ಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಿದರು. ಅಲ್ಲದೆ, ಈಗ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು, ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.
ತಹಸೀಲ್ದಾರ್ ಜಯಪ್ರಕಾಶ್ ಧ್ವಜಾರೋಹಣ ಮಾಡಿದರು. ವಿವಿಧ ಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳ ನೃತ್ಯ, ಪೊಲೀಸ್ ಇಲಾಖೆ ಮತ್ತು ಶಾಲಾ ಮಕ್ಕಳ ಪಥ ಸಂಚಲನ ಮನ ಸೆಳೆಯಿತು. ಪಪಂ ಸದಸ್ಯರಾದ ಮಹೇಶ್, ಮಹದೇವನಾಯಕ, ಮಂಜು, ಬಿ.ರವಿ, ಲಕ್ಷ್ಮೀ, ಪ್ರಭಾವತಿ, ಶಾಂತಮ್ಮ, ಇಒ ಉಮೇಶ್, ಬಿಇಒ ಕೆ. ಕಾಂತರಾಜು, ವೃತ್ತ ನಿರೀಕ್ಷಕ ಶಿವರಾಜ್ ಮುದೋಳ್, ಸರ್ಕಾರಿ ಪಬ್ಲಿಕ್ ಶಾಲೆ ಉಪಪ್ರಾಂಶುಪಾಲ ನಂಜುಂಡಯ್ಯ, ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್ ಇತರರಿದ್ದರು.