ಜಿಲ್ಲೆ

ಸರ್ಕಾರದ ಯೋಜನೆಗಳು ತಲುಪಲು ಪತ್ರಕರ್ತರು ಸಹಕರಿಸಿ

ಬೇಲೂರಿನ ತಾಲೂಕು ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಎನ್.ಆರ್.ಸಂತೋಷ್, ಟಿ.ಎ.ಶ್ರೀನಿಧಿ, ಹೆಬ್ಬಾಳು ಹಾಲಪ್ಪ, ಆನಂದಕುಮಾರ್ ಬೇಂದ್ರೆ, ಪೇಂಟ್ ರವಿ, ಶಿವರಾಜ್, ಗಣೇಶ್ ಇತರರಿದ್ದರು.

ಬೇಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಪ್ರತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಸಮಾಜ ಸೇವಕ ಎನ್.ಆರ್.ಸಂತೋಷ್ ಉದ್ಘಾಟಿಸಿದರು.


ನಂತರ ಮಾತನಾಡಿದ ಎನ್.ಆರ್.ಸಂತೊಷ್, ಪತ್ರಕರ್ತರು ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತಿದ್ದಾರೆ. ಇದರೊಂದಿಗೆ ಅವರು ಎಲ್ಲ ಕ್ಷೇತ್ರದಲ್ಲೂ ನಡೆಯುವ ಹಾಗು ಹೋಗುಗಳನ್ನ ಗುರುತಿಸಿ ಸಮಾಜದಲ್ಲಿ ನಡೆಯುವ ಸಾಕಷ್ಟು ವಿಷಯಗಳು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಿಸಿ, ಮೂಲ ಸೌಲಭ್ಯಗಳು ಸಾರ್ವಜನಿಕರಿಗೆ ಸರಿಯಾಗಿ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜತೆಗೆ ಬೇಲೂರು ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸಿಗರ ಹಾಗೂ ಸ್ಥಳೀಯರಿಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನು ಸರ್ಕಾರದಿಂದ ಬರುವಂತೆ ಮಾಡುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.


ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನಾಗರಾಜ್ ಮಾತನಾಡಿ, ಪರಿಸರ ಮನುಷ್ಯನ ಅಗತ್ಯತೆ ತೀರಿಸುತ್ತಿದೆ. ಆದರೆ ಪರಿಸರಕ್ಕೆ ನಾವೇನು ಮಾಡಿದ್ದೇವೆ ಎಂಬುದನ್ನು ಅರಿಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನದಿಂದ ಪರಿಸರದಲ್ಲಿ ಅಸಮತೋಲನ ಕಾಣುತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕಟಿಬದ್ಧರಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.


ಪತ್ರಕರ್ತರ ಸಂಘದ ಉಪಾಧ್ಯಕ್ಷ ಟಿ.ಎ.ಶ್ರೀನಿಧಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಆನಂದಕುಮಾರ್ ಬೇಂದ್ರೆ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪೇಂಟ್ ರವಿ, ಉಪಾಧ್ಯಕ್ಷ ಶಿವರಾಜ್, ಖಜಾಂಚಿ ಗಣೇಶ್, ಕಾರ್ಯದರ್ಶಿ ಲಕ್ಷ್ಮಣ್, ವೆಂಕಟೇಶ್ ಸೇರಿದಂತೆ ಇತರರಿದ್ದರು.