ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಜನಕಲ್ಯಾಣಕ್ಕೆ ಜಾರಿಗೊಳಿಸಿರುವ ನೂತನ ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಯುವನಿಧಿ ಯೋಜನೆ ಜಾರಿಗೆ ಸಿದ್ಧತೆಯಾಗಿದೆ. ಜಿಲ್ಲೆ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರೊೃೀತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದ್ದು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ. ಬಡ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಯೋಜನೆ ವರದಾನವಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 1.51 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ. 30.77 ಕೋಟಿ ರೂ. ಮೌಲ್ಯದ ಸೌಲಭ್ಯ ಪಡೆದಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅಡಿ ನೋಂದಣಿ ಕಾರ್ಯ ಆರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 3,82,523 ಮಹಿಳೆಯರು ಯೋಜನೆ ಉಪಯೋಗ ಪಡೆಯಲಿದ್ದಾರೆ ಎಂದರು.
ಭಾರತವು ಕಳೆದ 77ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ. ಪಕ್ಷಾತೀತವಾಗಿ ನಮ್ಮ ಎಲ್ಲ ಹಿರಿಯ ನಾಯಕರು ಮತ್ತು ಮುಖ್ಯಸ್ಥರು ದೇಶವನ್ನು ಅಭಿವೃದ್ಧಿಗಾಗಿ ಮುನ್ನಡೆಸಿದ್ದಾರೆ. ಭಾರತವು ಈಗ ಜಗತ್ತಿನ 5ನೇ ಬಲಿಷ್ಠ ರಾಷ್ಟ್ರವಾಗಿದೆ. ಯುವಕರು ದೇಶ ಸೇವೆಗೆ ಮುಂದಾಳತ್ವ ವಹಿಸಬೇಕು. ರಾಜಕೀಯ ಸೇರುವ ಮೂಲಕ ದೇಶದ ಅಭಿವೃದ್ಧಿಗೆ ಮತ್ತು ಸಮರ್ಥ ನಾಯಕತ್ವಕ್ಕೆ ಮುಂದಾಗಬೇಕು ಎಂದರು.
ಅನೇಕ ಮಹನೀಯರು ಮಾಡಿದ ತ್ಯಾಗ, ಬಲಿದಾನಗಳ ಫಲದಿಂದ ನಾವೆಲ್ಲ ಸ್ವಾತಂತ್ರ ಪಡೆದಿದ್ದೇವೆ. ಹೀಗಾಗಿ ಆ ಮಹನೀಯರನ್ನು ಸದಾ ಸ್ಮರಿಸಬೇಕಲ್ಲದೆ, ಅವರ ಹಾದಿಯಲ್ಲಿ ನಡೆಯುವುದು ಇಂದಿ ಅಗತ್ಯವಾಗಿದೆ. ಮಹಾತ್ಮ ಗಾಂಧೀಜಿ ಹೋರಾಟಕ್ಕೆ ಈ ಭಾಗದ ಮೈಲಾರ ಮಹದೇವಪ್ಪ, ಆರ್.ಆರ್. ದಿವಾಕರ ಸೇರಿ ಅನೇಕರು ಕೈ ಜೋಡಿಸಿದ್ದರು. ನಮ್ಮ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಲಾಂಛನಕ್ಕೆ ಗೌರವ ತೋರುವುದು, ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ನಂತರ ಪರೇಡ್ ಕಮಾಂಡರ್ ನಾಗರಾಜ ಪಾಟೀಲ್ ಮತ್ತು 2ನೇ ಪರೇಡ್ ಕಮಾಂಡರ್ ಕೆ.ಎಫ್.ಹದ್ದಣ್ಣವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮಾಜಿ ಸಭಾಪತಿ ವಿರಣ್ಣ ಮತ್ತಿಗಟ್ಟಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪಪೊಲೀಸ್ ಆಯುಕ್ತರಾದ ಡಾ. ಗೋಪಾಲ ಬ್ಯಾಕೋಡ, ರಾಜೀವ.ಎಂ., ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.
ಗಮನ ಸೆಳೆದ ಮಲ್ಲಕಂಬ: ಶಾಲಾ ಶಿಕ್ಷಣ ಇಲಾಖೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರರ್ದಶಿಸಿದ ಮಲ್ಲಕಂಬ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಶಾಲೆ ಶಿಕ್ಷಕ ಸಿದ್ದಾರೂಡ ಹೂಗಾರ ಮಾರ್ಗದರ್ಶನದಲ್ಲಿ ಮಕ್ಕಳು ಮಲ್ಲಕಂಬದ ಕಸರತ್ತುಗಳನ್ನು ಪ್ರದರ್ಶಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶುಭ ಹಾರೈಸಿದರಲ್ಲದೆ, ಮಲ್ಲಕಂಬದ ಸುಧಾರಿತ ಪರಿಕರಗಳನ್ನು ನೀಡುವ ಭರವಸೆ ನೀಡಿದರು.