ಕಂಪ್ಲಿ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ ವಿದ್ಯುತ್ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ಪ್ರತಿಭಟನೆ ನಡೆಸಿ ಜೆಸ್ಕಾಂ ಎಇಇ ಮಲ್ಲಿಕಾರ್ಜುನ ಗೌಡಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ರಾತ್ರಿ ವಿದ್ಯುತ್ ಸರಬರಾಜಿನಿಂದಾಗಿ ಕರಡಿ, ಚಿರತೆ, ವಿಷಜಂತುಗಳ ಹಾವಳಿ, ವಿದ್ಯುತ್ ತಂತಿ ತುಂಡಾಗಿ ಬಿದ್ದು ಅಪಘಾತ ಸಂಭವಿಸುತ್ತಿರುವುದು ಹೆಚ್ಚಾಗಿರುವುದರಿಂದ ಹಗಲು ವಿದ್ಯುತ್ ಪೂರೈಸಬೇಕು. ರೈತರಿಗೆ ಇಲಾಖೆಯಿಂದ ದೊರಕುವ ಸೌಲಭ್ಯ, ಯೋಜನೆಗಳ ಮಾಹಿತಿ ಪ್ರದರ್ಶಿಸಬೇಕು. ವಿದ್ಯುತ್ ಕೆಲಸಗಳಿಗೆ ಅಧಿಕೃತ ಲೈನ್‌ಮೆನ್‌ಗಳನ್ನೇ ಕಳುಹಿಸಬೇಕು. ಫೋನ್ ಮಾಡಿದಾಗ ಲೈನ್‌ಮೆನ್‌ಗಳು ಕರೆ ಸ್ವೀಕರಿಸುವುದಿಲ್ಲ. ಹಳೆಯ ವಿದ್ಯುತ್ ಲೈನ್ ತೆಗೆದು ಹೊಸ ಲೈನ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಎಇಇ ಮಲ್ಲಿಕಾರ್ಜುನಗೌಡ ಮಾತನಾಡಿ, ಬೆಳಗ್ಗೆ 4 ಗಂಟೆಯಿಂದ 11ಗಂಟೆವರೆಗೆ ವಿದ್ಯುತ್ ಪೂರೈಸಲಾಗುವುದು. ಹಳೆಯ ಲೈನ್ ಕಾಮಗಾರಿ ಅಪೂರ್ಣಗೊಂಡಿದ್ದು, ಪೂರ್ಣಗೊಳಿಸಲು ಅನುದಾನ ಬಿಡುಗಡೆಗೊಳ್ಳಬೇಕಿದೆ. ಒಂದು ವರ್ಷದಲ್ಲಿ ಹಳೆಯ ಲೈನ್ ಸಂಪೂರ್ಣ ಬದಲಿಸಲಾಗುವುದು ಎಂದು ಭರವಸೆ ನೀಡಿದರು. ರೈತರ ಫೋನ್ ಕರೆ ಸ್ವೀಕರಿಸಬೇಕು ಎಂದು ಲೈನ್‌ಮೆನ್‌ಗಳಿಗೆ ಸೂಚಿಸಿದರು.
ಪದಾಧಿಕಾರಿಗಳಾದ ಗುಬಾಜಿ ರಾಮಾಂಜಿನಿ, ಉಷಾ ದೇವೇಂದ್ರಪ್ಪ, ಪದ್ದಮ್ಮ, ಉಳ್ಳಿ ರಾಮು, ಸಿ.ಮುಸ್ತಾಫ, ಸಿ.ಮಲ್ಲಿಕಾರ್ಜುನ, ಎನ್.ಶಿವಪ್ಪ, ಜೆ.ಗಂಗಾಧರ, ವಿ.ವೆಂಕಟೇಶ, ಹರ್ಷಿತ್ ಇತರರಿದ್ದರು.